23.9 C
Karnataka
Sunday, April 20, 2025

ಇಚ್ಛಾಶಕ್ತಿ ಇದ್ದರೆ ಮಾತ್ರ ಜೀವನದಲ್ಲಿ ಸಾಧನೆ ಸಾಧ್ಯ:ಡಾ.ಯು.ಕೆ.ಮೋನು

ಮಂಗಳೂರು : ನಮ್ಮ ದೇಶದಲ್ಲಿ ಸಾಧನೆ ಮಾಡಲು ವಿಪುಲ ಅವಕಾಶವಿದೆ. ಎಲ್ಲ ವರ್ಗದ ಜನರಿಗೆ ಇಲ್ಲಿ ಬೆಳೆಯಲು ಅವಕಾಶವಿದೆ. ಆದರೆ ಇಚ್ಛಾಶಕ್ತಿ ಬೇಕು. ಹಾಗಿದ್ದರೆ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಕಣಚೂರು ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಡಾ.ಯು.ಕೆ.ಮೋನು ಹೇಳಿದರು.
ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಬುಧವಾರ ಮಂಗಳೂರು ಪ್ರೆಸ್‌ಕ್ಲಬ್ ಗೌರವ ಅತಿಥಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ‘ ಕೆಲಸ ಮಾಡಬೇಕೆಂಬ ಛಲವಿತ್ತು. ಹಾಗಾಗಿ ವಿದ್ಯಾಭ್ಯಾಸ ಕಡಿಮೆ ಇದ್ದರೂ ಸಾಧನೆ ಮಾಡಲು ಸಾಧ್ಯವಾಯಿತು ಎಂದರು.
ಕೆಲಸ ಮಾಡಬೇಕು, ಸಂಬಳ ಪಡೆಯಬೇಕೆಂಬ ಛಲ ಬಾಲ್ಯದಲ್ಲಿಯೇ ಇತ್ತು. ಆದರೆ ಶಿಕ್ಷಣ 3ನೇ ತರಗತಿಗೆ ಸೀಮಿತವಾಯಿತು.
ತಂದೆ ಬ್ರಿಟಿಷ್ ಸರ್ಕಾರದಲ್ಲಿ ನೌಕರನಾಗಿದ್ದರು. ಅನಿವಾರ್ಯ ಸ್ಥಿತಿಯಿಂದ ಬಡತನ ಅನುಭವಿಸಿದ್ದೆವು. ಬಾಲ್ಯದಲ್ಲಿ ಅಡಕೆ ಹೆಕ್ಕುವ ಕೆಲಸ, ಮೂಟೆ ಹೊರುವ ಕೆಲಸ ಸೇರಿದಂತೆ ಹಲವು ರೀತಿಯ ಕೂಲಿ ಕೆಲಸ ಮಾಡಿದ್ದೆ. ಇದ್ದಿಲು ಮಾಡುವ ಕೆಲಸ ಕೂಡ ಮಾಡಿದ್ದೆ,
ಹದಿ ಹರೆಯದಲ್ಲೇ ವ್ಯವಹಾರ ಕ್ಷೇತ್ರಕ್ಕೆ ಇಳಿದೆ. ಟಿಂಬರ್ ವ್ಯಾಪಾರದಲ್ಲಿ ಯಶಸ್ಸು ಕಂಡೆ. ಕೆಲವೇ ವರ್ಷದಲ್ಲಿ ರಾಜ್ಯದಲ್ಲೇ ಮುಂಚೂಣಿಯ ಟಿಂಬರ್ ವ್ಯಾಪಾರಿಯಾಗಿ ಗುರುತಿಸಿಕೊಂಡೆ ಎಂದು ಅವರು ಸಾಗಿ ಬಂದ ಹಾದಿಯನ್ನು ಸ್ಮರಿಸಿಕೊಂಡರು.
ಈ ನೆಲದ ಕಾನೂನು ಗೌರವಿಸಿ ಪ್ರಾಮಾಣಿಕವಾಗಿ ವ್ಯವಹಾರ ನಡೆಸುತ್ತಾ ಬಂದೆ. ಮಲೇಶ್ಯಾ ,ಸಿಂಗಾಪುರ ಸಹಿತ
ವಿದೇಶಗಳಲ್ಲಿಯೂ ವ್ಯವಹಾರ ಸಂಸ್ಥೆ ಆರಂಭಿಸಿದೆ. ಮೂರನೇ ಕ್ಲಾಸ್ ಕಲಿತರೂ ಇಂಗ್ಲಿಷ್, ಹಿಂದಿ, ಗುಜರಾತಿ, ತಮಿಳು ಸೇರಿದಂತೆ ಹತ್ತಾರು ಭಾಷೆಗಳನ್ನು ಕಲಿತೆ . ಹತ್ತಾರು ದೇಶ ಸುತ್ತಿದ್ದೇನೆ. ನನ್ನ ಮಕ್ಕಳು ಶಿಕ್ಷಣ ಪಡೆಯುವ ಸಂದರ್ಭ ಉತ್ತಮ ಶಿಕ್ಷಣ ಸಿಗಲು ಇರುವ ಹಲವು ತೊಡಕುಗಳನ್ನು ಸ್ವತಃ ಅನುಭವಿಸಿದೆ. ಇದೇ ನೋವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಕಾರಣವಾಯಿತು. ಹುಟ್ಟೂರಿನಲ್ಲಿಯೇ ಹಂತಹಂತವಾಗಿ ಶಿಕ್ಷಣ ಸಂಸ್ಥೆಗಳನ್ನು ತೆರೆದೆ. ಮೆಡಿಕಲ್ ಕಾಲೇಜು ಸ್ಥಾಪಿಸುವ ಬಹುಕಾಲದ ಕನಸು ಕೂಡಾ ನನಸಾಯಿತು
ಮುಂದೆ ಇಂಜಿನಿಯರಿಂಗ್ ಹಾಗೂ ಡೆಂಟಲ್ ಕಾಲೇಜು ಸ್ಥಾಪಿಸುವ ಯೋಜನೆ ಇದೆ ಎಂದು ಯು.ಕೆ.ಮೋನು ತಿಳಿಸಿದರು.
ರಾಜಕೀಯ ಆಸಕ್ತಿ ಇತ್ತು. ಆದರೆ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಎಂಎಲ್‌ಎ ಆಗುವ ಕನಸಿತ್ತು. ಪೂರಕ ವಾತಾವರಣವೂ ಇತ್ತು. ಶಾಸಕರಾಗಿದ್ದ ಯು.ಟಿ.ಪರೀದ್ ಅವರ ನಿಧನದಿಂದಾಗಿ ಪುತ್ರ ಯು.ಟಿ.ಖಾದರ್ ಅವಕಾಶ ಪಡೆದರು. ಶಾಸಕನಾಗಿ ಆಯ್ಕೆಯಾದ ಮೊದಲ ಅವಧಿಯಲ್ಲಿ ಖಾದರ್ ಅವರ ಕಾರ್ಯವೈಖರಿಯನ್ನು ಮೆಚ್ಚಿ ಮುಂದೆ ಅವರ ಸೀಟಿಗೆ ಪ್ರಯತ್ನ ಮಾಡಬಾರದೆಂದು ನಿರ್ಧಸಿದೆ. ಖಾದರ್ ರಾಜಕೀಯ ಕ್ಷೇತ್ರದಲ್ಲಿ ನಮ್ಮ ಸಮಾಜಕ್ಕೆ ಗೌರವ ತಂದುಕೊಟ್ಟಿದ್ದಾರೆ ಎಂದು ಅವರು ಹೇಳಿದರು.
ಹಿರಿಯ ಪತ್ರಕರ್ತ ಹಿಲರಿ ಕ್ರಾಸ್ತಾ ಕಾರ್ಯಕ್ರಮ ಉದ್ಘಾಟಿಸಿದರು. ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು.ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್, ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟ, ಪ್ರೆಸ್‌ಕ್ಲಬ್ ಪ್ರಧಾನಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಉಪಸ್ಥಿತರಿದ್ದರು. ಪ್ರೆಸ್‌ಕ್ಲಬ್ ಕಾರ್ಯದರ್ಶಿ ಪುಷ್ಪರಾಜ್ ಬಿ.ಎನ್ ಕಾರ್ಯಕ್ರಮ ನಿರೂಪಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles