16.7 C
Karnataka
Saturday, November 23, 2024

ಚೇಳಾರ್ ನಲ್ಲಿ ಆದಿತ್ಯ ಮುಕ್ಕಾಲ್ದಿಯವರಿಗೆ ನುಡಿ ನಮನ

ಸುರತ್ಕಲ್: ಚೇಳಾರ್ ಖಂಡಿಗೆ ಶ್ರೀ ಧರ್ಮರಸು ಉಳ್ಳಾಯ ದೈವಸ್ಥಾನದ ಗಡಿ ಪ್ರಧಾನರಾದ ಖಂಡಿಗೆ ಬೀಡು ಆದಿತ್ಯ ಮುಕ್ಕಾಲ್ದಿ ಅವರು ಇತ್ತೀಚೆಗೆ ನಿಧನರಾಗಿದ್ದು, ಅವರ ಗೌರವಾರ್ಥ ಸಾರ್ವಜನಿಕ ನುಡಿನಮನ ಕಾರ್ಯಕ್ರಮವು ಚೇಳಾರ್ ಖಂಡಿಗೆ ಬೀಡು ಶ್ರೀ ಧರ್ಮರಸು ದೈವಸ್ಥಾನದಲ್ಲಿ ನಡೆಯಿತು.
ಪಣಿಯೂರು ಗುತ್ತು ಕರುಣಾಕರ ಶೆಟ್ಟಿ ಮಾತನಾಡಿ ಆದಿತ್ಯ ಮುಕ್ಕಾಲ್ದಿ ಅವರು ಮುವತ್ತು ವರ್ಷಗಳ ಕಾಲ ಗಡಿ ಪ್ರದಾನರಾಗಿ ಸಲ್ಲಿಸಿದ ಸೇವೆ ಅನನ್ಯವಾದುದು. ಆದಿತ್ಯ ಮುಕ್ಕಾಲ್ದಿಯವರ ಉಸಿರು ನಿಂತರೂ ಹೆಸರು ಶಾಶ್ವತವಾಗಿ ಉಳಿಯಲಿದೆ ಎಂದರು. ಚೇಳಾರ್ ಶ್ರೀ ಶಾರದಾ ವಿದ್ಯಾ ಟ್ರಸ್ಟ್ ನ ಅಧ್ಯೆಕ್ಷೆ ವೀಣಾ ಶೆಟ್ಟಿ ಮಾತನಾಡಿ ಆದಿತ್ಯ ಮುಕ್ಕಾಲ್ದಿ ಅವರಲ್ಲಿ ಅಭಿಮಾನ, ಆತ್ಮೀಯತೆ, ಪ್ರೀತಿಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಮಹಿಳೆಯರಿಗೆ ನೀಡುವ ಗೌರವವನ್ನು ಅವರಲ್ಲಿ ಕಾಣಲು ಸಾಧ್ಯವಿತ್ತು ಎಂದರು.
ಸುರತ್ಕಲ್ ಬಂಟರ ಸಂಘದ ಮಾಜಿ ಅಧ್ಯಕ್ಷ ಉಲ್ಲಾಸ್ ಶೆಟ್ಟಿ ಪೆರ್ಮುದೆ ಮಾತನಾಡಿ ಆದಿತ್ಯ ಮುಕ್ಕಾಲ್ದಿ ಅವರು ಕೃಷಿ ಬದುಕಿನ ಜೊತೆಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು. ದೈವಾರಾಧನೆಯಲ್ಲಿ ಅಧಿಕಾರಯುತವಾಗಿ ಮಾತನಾಡ ಬಲ್ಲರು. ಅವರು ತತ್ವ ಸಿದ್ದಾಂತದೊಂದಿಗೆ ಬದುಕಿದವರು. ಸ್ವಾರ್ಥ ಇಲ್ಲದ ನಿಸ್ವಾರ್ಥ ಬದುಕನ್ನು ಆದಿತ್ಯ ಮುಕ್ಕಾಲ್ದಿ ಅವರಲ್ಲಿ ಕಂಡುಕೊಂಡಿದ್ದೇವೆ ಎಂದು ಹೇಳಿದರು.
ಚಿತ್ತರಂಜನ್ ಭಂಡಾರಿ ಐಕಳಬಾವ ಮಾತನಾಡಿ ತುಳುನಾಡಿನ ಆಚಾರ ವಿಚಾರ, ದೈವಾರಾಧನೆಯಲ್ಲಿ ಆದಿತ್ಯ ಮುಕ್ಕಾಲ್ದಿ ಅವರಿಗೆ ಅಪಾರ ಅನುಭವ ಇತ್ತು. ದೈವಾರಾಧನೆಯ ಕೊಡಿಯಡಿಯಲ್ಲಿ ಆದಿತ್ಯ ಮುಕ್ಕಾಲ್ದಿ ಇದ್ದಾರೆ ಎಂದಾಗ ಕೋಲ ಕಟ್ಟುವವರಲ್ಲೂ ಭಯ ಇತ್ತು. ಅವರಲ್ಲಿದ್ದಂತಹ ಯಜಮಾನಿಕೆ ನೋಡಲು ಮುಂದಿನ ದಿನಗಳಲ್ಲಿ ಸ್ವಲ್ಪಕಷ್ಟವಾಗ ಬಹುದು. ಯಾವುದೇ ವಿಚಾರದಲ್ಲಿ ಅವರು ರಾಜಿಯಾಗುತ್ತಿರಲಿಲ್ಲ. ಇದ್ದದನ್ನುಇದ್ದ ಹಾಗೆ ಹೇಳುವ ಸ್ವಭಾವ ಅವರದ್ದು. ಹೀಗಾಗಿ ಅವರು ಕೆಲವು ಸಂದರ್ಭಗಳಲ್ಲಿ ನಿಷ್ಟುರವಾದಿಯಾಗುತ್ತಿದ್ದರು. ಅವರ ಬದುಕು ಇತರರಿಗೆ ಮಾದರಿಯಾಗಿದೆ ಎಂದರು.
ದಿವಾಕರ ಸಾಮಾನಿ ಚೇಳಾರ್ ಗುತ್ತು ಮಾತನಾಡಿ ಆದಿತ್ಯ ಮುಕ್ಕಾಲ್ದಿ ಅವರು ಕೃಷಿ, ಹೈನುಗಾರಿಕೆ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲೂ ತನ್ನನ್ನು ತೊಡಗಿಸಿಕೊಂಡವರು. ದೈವಾರಾಧನೆಯ ಕ್ಷೇತ್ರದಲ್ಲಿ ಅವರು ನಿರರ್ಗಳವಾಗಿ ಮಾತನಾಡ ಬಲ್ಲರು. ಆದಿತ್ಯ ಅಂದರೆ ಸೂರ್ಯ. ಅವರು ಎಲ್ಲೇ ಹೋಗಲಿ ಸೂರ್ಯನಂತೆ ಮಿನುಗುತ್ತಿದ್ದರು ಎಂದು ಹೇಳಿದರು.ಚೇಳಾರ್ ಗ್ರಾಮ ಪಂಚಾಯತ್ ಅಧ್ಯಕ್ಷ ಜಯಾನಂದ ಮಾತನಾಡಿ ಆದಿತ್ಯ ಮುಕ್ಕಾಲ್ದಿ ಯುವಕರಿಗೆ ಪ್ರೇರಣಾ ಶಕ್ತಿಯಾಗಿದ್ದರು.‌ಒಳ್ಳೆಯ ಕೆಲಸಗಳನ್ನು ಮಾಡುವಾಗ ಯುವಕರನ್ನು ಹುರಿದುಂಬಿಸುತ್ತಿದ್ದರು ಎಂದರು.
ದೈವಾರಾಧನೆ ಕ್ಷೇತ್ರದಲ್ಲಿ ನಿರಂತರ ಮುವತ್ತು ವರ್ಷಗಳ ಕಾಲ ಸೇವೆ ಮಾಡಿರುವ ಆದಿತ್ಯ ಮುಕ್ಕಾಲ್ದಿ ಅವರು ಗಡಿಪ್ರಧಾನರ ಮಧ್ಯೆ ಮಿಂಚಿದವರು. ದೈವರಾಧನೆಯಲ್ಲಿ ತಪ್ಪು ನಡೆದರೆ ಅಲ್ಲೇ ತಪ್ಪನ್ನು ಎತ್ತಿ ಹಿಡಿದು ಪ್ರಶ್ನಿಸುತ್ತಿದ್ದರು. ಖಂಡಿಗೆ ಕ್ಷೇತ್ರದಲ್ಲಿ ಅವರು ಸೇವೆಗೈದು ಕ್ಷೇತ್ರದ ಅಭಿವೃದ್ದಿಯಲ್ಲಿ ಆಡಳಿತ ಸಮಿತಿಯ ಅಧ್ಯಕ್ಷ ದಯಾನಂದ ಶೆಟ್ಟಿ ಅವರೊಂದಿಗೆ ಕೈ ಜೋಡಿಸಿ ಕೆಲಸ ಮಾಡಿದ್ದಾರೆ ಎಂದು ಉದಯ ಕುಮಾರ್ ಶೆಟ್ಟಿ ಚೇಳಾರ್ ಪಡುಬಾಳಿಕೆ ಪ್ರಾಸ್ತಾವಿಕ ಮಾತಿನಲ್ಲಿ ತಿಳಿಸಿದರು.
ಪುಷ್ಪರಾಜ ಶೆಟ್ಟಿ ಮದ್ಯ, ಪುಷ್ಪರಾಜ ಶೆಟ್ಟಿ ಕುಡುಂಬೂರು ಮೊದಲಾದವರು ಮಾತನಾಡಿದರು. ಖಂಡಿಗೆ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷ ದಯಾನಂದ ಶೆಟ್ಟಿ ಖಂಡಿಗೆ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು, ಪ್ರಭಾಕರ ಶೆಟ್ಟಿ ಬಾಳ, ಜಗನ್ನಾಥ ಶೆಟ್ಟಿ ಬಾಳ, ಆಡಳಿತ ಸಮಿತಿಯ ಕಾರ್ಯದರ್ಶಿ ಚರಣ್ ಕುಮಾರ್, ಗೋಪಾಲ ಶೆಟ್ಟಿ ಮೇಗಿನಗುತ್ತು, ವಸಂತ ಸುವರ್ಣ ಮಿತ್ರಪಟ್ನ, ಬಾಳ ಯತಿರಾಜ್ ಡಿ ಸಾಲ್ಯಾನ್ ಸುರತ್ಕಲ್, ಖಂಡಿಗೆ ಬೀಡು ಶೇಖರ ಶೆಟ್ಟಿ, ದೀಪಕ್ ಶೆಟ್ಟಿ, ಪ್ರಸಾದ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಕೋಶಾಧಿಕಾರಿ ಸುಧಾಕರ ಶೆಟ್ಟಿ ಖಂಡಿಗೆ ವಂದಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles