ಬದಿಯಡ್ಕ: ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ ಹಾಗೂ ವೇದಮಾತಾ ಟ್ರಸ್ಟ್ ಅಗಲ್ಪಾಡಿ ಇದರ ನೇತೃತ್ವದಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆಯುವ ಋಕ್ ಸಂಹಿತಾ ಯಾಗ ಹಾಗೂ ಸಹಸ್ರ ಚಂಡಿಕಾ ಯಾಗದ ಅಂಗವಾಗಿ ಹಸಿರುವಾಣಿ ಮೆರವಣಿಗೆ ಮಂಗಳವಾರ ಭವ್ಯ ಶೋಭಯಾತ್ರೆಯೊಂದಿಗೆ ನಡೆಯಿತು.
ಕುರುಮುಜ್ಜಿಕಟ್ಟೆ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಿಂದ ಆರಂಭಗೊಂಡ ಹಸಿರುವಾಣಿ ಹೊರೆಕಾಣಿಕೆಗೆ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಡಾ.ಕಲ್ಲಡ್ಕ ಪ್ರಭಾಕರ್ ಭಟ್, ಆಡಳಿತ ಮೊಕ್ತೇಸರ ಕೋಳಿಕ್ಕಜೆ ಅನಂತಗೋವಿಂದ ಶರ್ಮಾ, ರಾಜೇಶ್ ಮಜೆಕ್ಕಾರ್, ರಮೇಶ್ ಶರ್ಮಾ ಕೆ.ವಿ. ಮತ್ತಿತರರು ಉಪಸ್ಥಿತರಿದ್ದರು.
ವಿವಿಧ ಕಡೆಗಳಿಂದ ಆಗಮಿಸಿದ ಹೊರೆಕಾಣಿಕೆ ಮೆರವಣಿಗೆಯಲ್ಲಿ ಆಕರ್ಷಣೀಯ ಕಲಾ ಪ್ರಕಾರಗಳು ಮೆರಗು ನೀಡಿತ್ತು. ಕುಣಿತ ಭಜನೆ, ಮಹಿಳೆಯರ ಸಿಂಗಾರಿ ಮೇಳ, ಟ್ಯಾಬ್ಲೋ, ಡೊಳ್ಳು ಕುಣಿತದೊಂದಿಗೆ ಮೆರವಣಿಗೆಯು ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರಕ್ಕೆ ತಲುಪಿ ಅಲ್ಲಿಂದ ಮತ್ತೆ ಜೊತೆಗೂಡಿ ಶ್ರೀ ಕ್ಷೇತ್ರಕ್ಕೆ ತಲುಪಿತ್ತು.
ಹಸಿರುವಾಣಿ ಹೊರೆಕಾಣಿಕೆಯಲ್ಲಿ ಸಾಮಗ್ರಿಗಳನ್ನು ತುಂಬಿಸಿದ ವಾಹನಗಳೊಂದಿಗೆ ನೂರಾರು ಮಂದಿ ಭಾಗವಹಿಸಿದರು.
ಬಳಿಕ ಶ್ರೀ ಕ್ಷೇತ್ರದಲ್ಲಿ ಸಂಜೆ ಉಗ್ರಾಣ ಮುಹೂರ್ತ, ಚಂಡಿಕಾಯಾಗ ಶಾಲೆಯಲ್ಲಿ ವಾಸ್ತು ರಕ್ಷೆಘ್ನ ಹೋಮ, ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ರಾಜಾ ಕೌಶಿಕ-ಭಕ್ತ ಮಾರ್ಕಂಡೇಯ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತ್ತು.