ಬದಿಯಡ್ಕ: ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ ಹಾಗೂ ವೇದಮಾತಾ ಟ್ರಸ್ಟ್ ಅಗಲ್ಪಾಡಿಯ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆಯುತ್ತಿರುವ ಯಾಗದ ಅಂಗವಾಗಿ ಬುಧವಾರ ಬೆಳಗ್ಗೆ ಋಕ್ ಸಂಹಿತಾ ಯಾಗ ಹಾಗೂ ಸಹಸ್ರ ಚಂಡಿಯಾಗ ಮಹಾಪೂರ್ಣಾಹುತಿ, ಪೂಜೆ ನಡೆಯಿತು.
ಮುಂಜಾನೆ ಅಗ್ನಿ ಪ್ರತಿಷ್ಠೆ ನಡೆದು ಸಹಸ್ರ ಚಂಡಿಕಾಯಾಗ ಪ್ರಾರಂಭವಾಯಿತು. ಮೊದಲು ಋಕ್ ಸಂಹಿತಾ ಯಾಗದ ಪೂರ್ಣಾಹುತಿ ನಡೆದು ಪೂಜೆ ನಡೆಯಿತು. ಬಳಿಕ ಸಹಸ್ರ ಚಂಡಿಯಾಗದ ಮಹಾಪೂರ್ಣಾಹುತಿ, ಪೂಜೆ ನೆರವೇರಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಮಹಾ ಮಂತ್ರಾಕ್ಷತೆ, ಅನ್ನ ಸಂತರ್ಪಣೆ ನಡೆಯಿತು.
ಯಾಗದ ಮಹಾಪೂರ್ಣಾಹುತಿ ಸುಸಂದರ್ಭದಲ್ಲಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಕ್ಷೇತ್ರದ ಆಡಳಿತ ಮೊಕ್ತೇಸರ ಎ.ಜಿ.ಶರ್ಮಾ, ವೇದಮಾತ ಟ್ರಸ್ಟ್ ಹಾಗೂ ಯಾಗ ಸಮಿತಿ ಅಧ್ಯಕ್ಷ ತಲೇಖ ಸುಬ್ರಹ್ಮಣ್ಯ ಭಟ್, ಕ್ಷೇತ್ರದ ಆಡಳಿತ ಮೊಕ್ತೇಸರರು, ನಾನಾ ಸಮಿತಿಯ ಪ್ರಮುಖರು
ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಖ್ಯಾತ ವಯಲಿನ್ ವಾದಕ ವಿದ್ವಾನ್ ಸಿ.ಎಸ್.ಅನುರೂಪ್ ಹಾಗೂ ಅವರ ಶಿಷ್ಯೆ ಅಂತಾರಾಷ್ಟ್ರೀಯ ಖ್ಯಾತಿಯ ಬಾಲಕಿ ಗಂಗಾ ಶಶಿಧರನ್ ತ್ರಿಶ್ಯೂರ್ ಮತ್ತು ಬಳಗದವರಿಂದ ದ್ವಂದ್ವ ವಯಲಿನ್ ವಾದನ ಭಗವದ್ಭಕ್ತರನ್ನು ರಂಜಿಸಿತು.
ಉಚಿತ ಬಸ್ ಸೌಲಭ್ಯ: ಋಕ್ ಸಂಹಿತಾ ಯಾಗ ಮತ್ತು ಸಹಸ್ರ ಚಂಡಿಕಾ ಯಾಗದ ಪೂರ್ಣಾಹುತಿ ಹಿನ್ನೆಲೆಯಲ್ಲಿ ಭಗವದ್ಭಕ್ತರ ಅನುಕೂಲಕ್ಕಾಗಿ ಬದಿಯಡ್ಕ- ಮುಳ್ಳೇರಿಯಾ ರಸ್ತೆಯ ಪಿಲಾಂಕಟ್ಟೆಯಿಂದ ಅಗಲ್ಪಾಡಿ ಕ್ಷೇತ್ರಕ್ಕೆ ದುರ್ಗಾಫ್ರೆಂಡ್ಸ್ ಕ್ಲಬ್ ಅಗಲ್ಪಾಡಿ ಮತ್ತು ಪ್ರಚಾರ ಸಮಿತಿ ವತಿಯಿಂದ ಉಚಿತ ಬಸ್ ಸೌಲಭ್ಯ ಕಲ್ಪಿಸಲಾಗಿತ್ತು.
ಶ್ರೀ ಕ್ಷೇತ್ರದಲ್ಲಿ ಮಾ.27ರಿಂದ ಏ.3ರ ವರೆಗೆ ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಋಕ್ ಸಂಹಿತಾ ಯಾಗ, ಸಹಸ್ರ ಚಂಡಿಕಾ ಯಾಗ ಹಾಗೂ ನಾನಾ ಧಾರ್ಮಿಕ ಕಾರ್ಯಕ್ರಮ ಅತ್ಯಂತ ವ್ಯವಸ್ಥಿತವಾಗಿ ಮುಕ್ತಾಯಗೊಂಡಿದೆ. ಪ್ರತಿನಿತ್ಯ ಸಾವಿರಾರು ಸಂಖ್ಯೆಯ ಭಕ್ತರು ಯಾಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ನೂರಾರು ವೈದಿಕರ, ಸ್ವಯಂ ಸೇವಕರ ಹಗಲಿರುಳು ಪರಿಶ್ರಮದ ಫಲವಾಗಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು ಎ೦ದು ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೋಕ್ತೇಸರ ಎ.ಜಿ.ಶರ್ಮಾ ತಿಳಿಸಿದ್ದಾರೆ.