ಮಂಗಳೂರು: “2024ರ ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಸ್ಥಾನದಲ್ಲಿ ಭವ್ಯ ಮಂದಿರದ ಲೋಕಾರ್ಪಣೆ ಹಾಗೂ ನೆಲ ಅಂತಸ್ತಿನ ಗರ್ಭಗುಡಿಯಲ್ಲಿ ಬಾಲರಾಮನ ನೂತನ ವಿಗ್ರಹ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ದೇಶದಾದ್ಯಂತ ಮನೆಮನೆಗಳಿಗೆ ಅಯೋಧ್ಯೆಯಲ್ಲಿ ಪೂಜಿಸಲ್ಪಟ್ಟ ಮಂತ್ರಾಕ್ಷತೆಯನ್ನು ವಿತರಿಸುವ ಅಭಿಯಾನವನ್ನು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹಮ್ಮಿಕೊಂಡಿದೆ. ದಕ್ಷಿಣ ಕನ್ನಡ,
ಉಡುಪಿ, ಮತ್ತು ಕೊಡಗು ಜಿಲ್ಲೆಗಳು ಸೇರಿದಂತೆ ಮಂಗಳೂರು ವಿಭಾಗದಲ್ಲಿ ಎಂಟು ಲಕ್ಷ ಮನೆಗಳಿಗೆ ಮಂತ್ರಾಕ್ಷತೆ ವಿತರಣೆಯ ಕಾರ್ಯಕ್ರಮದ ಯೋಜನೆ ಹಾಕಿಕೊಳ್ಳಲಾಗಿದೆ” ಎಂದು ವಿಹಿಂಪ ಪ್ರಾಂತ ಕಾರ್ಯಾಧ್ಯಕ್ಷ ಡಾ.ಎಂ.ಬಿ. ಪುರಾಣಿಕ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
“ಜನವರಿ 22ರಂದು ಕೊಡಗು ಸೇರಿದಂತೆ ಕರಾವಳಿಯ ಸಾವಿರಾರು ಕೇಂದ್ರಗಳಲ್ಲಿ ಧಾರ್ಮಿಕ ಕಾರ್ಯಕ್ರಮವನ್ನು ನಡೆಸುವುದರೊಂದಿಗೆ ಅಯೋಧ್ಯೆಯಲ್ಲಿ ನಡೆಯುವ ಎಲ್ಲಾ ವೈಧಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನೂ ರಾಮಭಕ್ತರಿಗೆ ನೇರಪ್ರಸಾರದ ಮೂಲಕ ನೋಡಲು ವ್ಯವಸ್ಥೆ ಮಾಡಲಾಗುತ್ತದೆ. ಜನವರಿ 1ರಿಂದ ಜನವರಿ 15ರತನಕ ಮನೆ ಮನೆ ಸಂಪರ್ಕ ಅಭಿಯಾನ ನಡೆಯಲಿದೆ. ಜನವರಿ 22ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ಸುಮುಹೂರ್ತದಲ್ಲಿ ಶ್ರೀರಾಮದೇವರ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಇಡೀ ದೇಶದಲ್ಲಿ ಈ ಸಂಧರ್ಭದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರತೀ ಮನೆಗೆ ಪವಿತ್ರ ಮಂತ್ರಾಕ್ಷತೆ, ರಾಮಮಂದಿರದ ಭಾವಚಿತ್ರ ಮತ್ತು ಆಮಂತ್ರಣ ಪತ್ರವನ್ನು ಕೊಡಲಾಗುವುದು. 22ರಂದು ದಿನವಿಡೀ ನಡೆಯುವ ಕಾರ್ಯಕ್ರಮದ ವಿವರವನ್ನು ತಿಳಿಸಲಾಗುವುದು, ಈಗಾಗಲೇ ಬೂತ್, ಗ್ರಾಮಗಳಿಗೆ ಮಂತ್ರಾಕ್ಷತೆಯನ್ನು ತಲುಪಿಸಿದ್ದು, ಮಂತ್ರಾಕ್ಷತೆಯನ್ನು ವಿತರಿಸುವ ಈ ಅಭಿಯಾನದಲ್ಲಿ ಈಗಾಗಲೇ ತಂಡಗಳು ರಚನೆಯಾಗಿವೆ. ಈ ಅಭಿಯಾನದಲ್ಲಿ ಸಂಘಟನೆಗಳು, ಸಂಘಸಂಸ್ಥೆಗಳು, ಧಾರ್ಮಿಕ ಕ್ಷೇತ್ರಗಳು ಕೈಜೋಡಿಸಿವೆ. ದೇವಸ್ಥಾನ ಮತ್ತು ದೈವಸ್ಥಾನಗಳಲ್ಲಿ ವಿಶೇಷ ಪೂಜೆಯೊಂದಿಗೆ ಶ್ರೀ ರಾಮ ಜಯರಾಮ ಜಯ ಜಯ ರಾಮ ಎಂಬ ತಾರಕಮಂತ್ರದ 108 ಬಾರಿ ಜಪ, ಹನುಮಾನ್ ಚಾಲೀಸಾ ಪಠಣ, ಭಜನೆ, ಕೀರ್ತನೆ, ಸುಂದರ ಕಾಂಡ ಪಾರಾಯಣ, ರಾಮರಕ್ಷಾ ಸ್ತೋತ್ರದ ಪಠಣ, ನಮ್ಮ ನಮ್ಮ ಇಷ್ಟ ದೇವರ ಜಪ ಮತ್ತು ಪ್ರಸಾದ ವಿತರಣೆ ಮಾಡಲು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಕರೆ ಕೊಟ್ಟಿದೆ. ಈಗಾಗಲೇ ಸಾವಿರಾರು
ಧಾರ್ಮಿಕ ಕ್ಷೇತ್ರಗಳಲ್ಲಿ ಈ ಕಾರ್ಯಕ್ರಮಗಳ ಸಿದ್ಧತೆ ನಡೆಸಿದ್ದು, ಲಕ್ಷಾಂತರ ಭಕ್ತರು ಈ ವೈಧಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ” ಎಂದು ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ಹೇಳಿದರು.
ನೇರ ಪ್ರಸಾರದ ವ್ಯವಸ್ಥೆ:
ಜನವರಿ 22 ನೇ ತಾರೀಕು ಶ್ರೀ ರಾಮಲಲ್ಲಾನ ನೂತನ ವಿಗ್ರಹ ಪ್ರತಿಷ್ಠಾಪನೆಯ ಕಾರ್ಯಕ್ರಮವು ದೂರದರ್ಶನದಲ್ಲಿ ನೇರ ಪ್ರಸಾರವಾಗಲಿದ್ದು, ಈ ಕಾರ್ಯಕ್ರಮವನ್ನು ಆಯಾಯ ಕೇಂದ್ರದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದ ಸ್ಥಳದಲ್ಲಿ ಟಿವಿ, ಎಲ್ ಇಡಿ ಪರದೆಯ ಮೂಲಕ ವೀಕ್ಷಿಸಲು ವ್ಯವಸ್ಥೆ ಮಾಡಲಾಗುವುದು.
ಜನವರಿ 1 ರಿಂದ 15 ರ ತನಕ ನಮ್ಮ ಕಾರ್ಯಕರ್ತರು ಮಂತ್ರಾಕ್ಷತೆಯನ್ನು ತಮ್ಮ ಮನೆಗೆ ವಿತರಿಸಲಿದ್ದು. ಆ ಪವಿತ್ರ ಮಂತ್ರಾಕ್ಷತೆಯನ್ನುಶ್ರದ್ಧಾ ಪೂರ್ವಕವಾಗಿ ಸ್ವೀಕರಿಸಿ, ಜನವರಿ 22 ರಂದು ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ನಡೆಯುವ ಕ್ರಾಯಕ್ರಮದಲ್ಲಿ ಪಾಲ್ಗೊಂಡು,ಅಯೋಧ್ಯೆಯ ನೇರಪ್ರಸಾರದ ಕಾರ್ಯಕ್ರಮವನ್ನು ವೀಕ್ಷಿಸಿ, ಸಂಜೆ ಮನೆಗಳಲ್ಲಿ ದೀಪಗಳನ್ನು ಹಚ್ಚಿ ಆ ಶುಭ ದಿನವನ್ನು ಸಂಭ್ರಮ ಸಡಗರದಿಂದ ಆಚರಿಸಬೇಕಾಗಿ ವಿಹಿಂಪ ಮನವಿ ಮಾಡಿದೆ.