ಮ೦ಗಳೂರು: ಮಾಂಡ್ ಸೊಭಾಣ್ ತಿಂಗಳ ವೇದಿಕೆ ಸರಣಿಯ 277ನೇ ಹಾಗೂ 24 ನೇ ವರ್ಷದ ಮೊದಲ ಕಾರ್ಯಕ್ರಮ ಜನವರಿ 5 ರಂದು ಶಕ್ತಿನಗರದ ಕಲಾಂಗಣದಲ್ಲಿ ನಡೆಯಿತು. ಬಯಲು ರಂಗ ಮಂದಿರವು ಪ್ರೇಕ್ಷಕರಿಂದ ತುಂಬಿ ತುಳುಕಿದ್ದು, ಒಂಬತ್ತರ ಹರಯದ ಬಾಲೆ ಅಲನಿ ಡಿಸೋಜ ಈ ಸಂಗೀತ ರಸಮಂಜರಿಯಲ್ಲಿ ಒಂಬತ್ತು ಹಾಡುಗಳನ್ನು ಹಾಡಿ ಮನ ರಂಜಿಸಿದಳು.
ಕಾರ್ಯಕ್ರಮದಲ್ಲಿ ಮೊದಲಿಗೆ ಮಾಂಡ್ ನಾಟಕ ತಂಡದ ರಜತ ಮಹೋತ್ಸವ ಸಂದರ್ಭದಲ್ಲಿ ಆಯೋಜಿಸುವ ಕೊಂಕಣಿ ನಾಟಕ ಸರ್ದಾರ್ ಸಿಮಾಂವ್’ ಇದರ ಬ್ಯಾನರ್ ಬಿಡುಗಡೆಯನ್ನು ಕಲಾಂಗಣ ಚೇರ್’ಮ್ಯಾನ್ ರೊನಾಲ್ಡ್ ಮೆಂಡೊನ್ಸಾ ನೆರವೇರಿಸಿದರು. ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ
ಗುಮಟ್’ ಸಂಗೀತ ವಾದ್ಯವನ್ನು ಅಲನಿಗೆ ನೀಡಿ ಕೊಂಕಣಿ ಗಾಯನ ಪರಂಪರೆಯನ್ನು ಮುಂದುವರೆಸುವಂತೆ ಕೋರಿ ಶುಭ ಹಾರೈಸಿದರು. ದುಬಾಯಿಯ ಉದ್ಯಮಿ ಮತ್ತು ದಾನಿ ವಿಜಯ್ ಡಿಸೋಜ ಅವರು ಗಂಟೆ ಬಾರಿಸಿ ಚಾಲನೆ ನೀಡಿದರು. ವೇದಿಕೆಯಲ್ಲಿ ಮಾಂಡ್ ಸೊಭಾಣ್ ಪದಾಧಿಕಾರಿಗಳಾದ ಲುವಿ ಜೆ ಪಿಂಟೊ, ಕೇರನ್ ಮಾಡ್ತಾ ಹಾಗೂ ಮಾಂಡ್ ನಾಟಕ ತಂಡದ ಪರವಾಗಿ ಅರುಣ್ ರಾಜ್ ರೊಡ್ರಿಗಸ್, ವಿದ್ದು ಉಚ್ಚಿಲ್ ಮತ್ತು ವಿಕಾಸ್ ಕಲಾಕುಲ್ ಉಪಸ್ಥಿತರಿದ್ದರು.
ನಂತರ ತಾಕೊಡೆಯ ಒಂಬತ್ತು ವರ್ಷದ ಬಾಲ ಗಾಯಕಿ ಆಲನಿ ಲಿಯೊರಾ ಡಿಸೋಜ ಮೇರು ಗೀತರಚನಕಾರರಾದ ಚಾಫ್ರಾ ಡಿಕೋಸ್ತಾ, ವಿಲ್ಫಿ ರೆಬಿಂಬಸ್, ಕ್ಲೊಡ್ ಡಿಸೋಜ, ಕ್ರಿಸ್ ಪೆರಿ, ಎರಿಕ್ ಒಝೇರಿಯೊ, ಮೆಲ್ವಿನ್ ಪೆರಿಸ್ ಮತ್ತು ಲೋಯ್ಡ್ ರೇಗೊ ಇವರ ಒಂಬತ್ತು ಹಾಡುಗಳನ್ನು ಹಾಡಿ ಕಲಾಂಗಣದಲ್ಲಿ ಕಿಕ್ಕಿರಿದು ತುಂಬಿದ ಜನರ ಮನ ರಂಜಿಸಿದಳು. ಮೇವಿಶ್ ಇವರ ಸಂಗೀತ ನಿರ್ದೇಶನದಲ್ಲಿ ಸಚಿನ್ ಸಿಕ್ವೇರಾ (ಡ್ರಮ್ಸ್), ಜೇಸನ್ ಡಿಸೋಜ (ಲೀಡ್ ಗಿಟಾರ್), ಆಶ್ವಿನ್ ಕೊರೆಯಾ (ಬೇಸ್ ಗಿಟಾರ್), ಶೊನ್ ಬ್ರಾಸ್ಲಿನ್ (ವಯೊಲಿನ್) ಮತ್ತು ಅಶ್ವಿಲ್ ಕುಲಾಸೊ (ಕೀಬೋರ್ಡ್) ಇವರು ಸಂಗೀತ ನೀಡಿದರು.
ತರಬೇತುದಾರರಾದ ಶಿಲ್ಪಾ ಕುಟಿನ್ಹಾ, ಯುವ ಗಾಯಕ ಆರ್ವಿನ್ ಡಿಕುನ್ಹಾ, ಮತ್ತು ಬ್ಲೂ ಏಂಜಲ್ಸ್ ಗಾಯನ ತಂಡವು ಗಾಯನದಲ್ಲಿ ಸಹಕರಿಸಿದರು. ರೋಶನ್ ಕುಲ್ಶೇಕರ್ ಅವರ ಸಂಗಡ ಮಕ್ಕಳಾದ ಸಂಜನಾ ಮತಾಯಸ್, ಏಂಜಲ್ ಕುಟಿನ್ಹಾ, ಅನಿಕಾ ಡಿಸೋಜ ಮತ್ತು ಶನನ್ ಡಿಕೋಸ್ತಾ ಅವರು ಸುಂದರವಾಗಿ ನಿರೂಪಿಸಿದರು. ಅಲನಿಯ ತಾಯಿ ಲೊಲಿಟಾ ಸಲ್ಡಾನ್ಹಾ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆ ನೆನಪಿನ ಕಾಣಿಕೆ ನೀಡಿದರು. ತಂದೆ ಅಜಯ್ ಗ್ಲೆನ್ ಡಿಸೋಜ ಧನ್ಯವಾದವನ್ನಿತ್ತರು.