20.6 C
Karnataka
Friday, November 22, 2024

ಏ. 14: ನಾರಾಯಣ ಗುರು ವೃತ್ತದಿಂದ ಹಂಪನಕಟ್ಟೆ ಸಿಗ್ನಲ್‌ ತನಕ ಪ್ರಧಾನಿ ಮೋದಿ ಅವರ ಬೃಹತ್ ರೋಡ್‌ ಶೋ

ಮಂಗಳೂರು: ಏಪ್ರಿಲ್ 14ರಂದು ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಸಮಾವೇಶದ ಬದಲು ಸಂಜೆ 5 ಗಂಟೆಗೆ ಬೃಹತ್ ರೋಡ್‌ಶೋ ನಡೆಸಲು ತೀರ್ಮಾನಿಸಲಾಗಿದೆ ಎಂದು ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ತಿಳಿಸಿದರು.

ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ತುರ್ತು ಸುದ್ದಿಗೋಷ್ಠಿಯಲ್ಲಿ ಬಗ್ಗೆ ಮಾಹಿತಿ ನೀಡಿದ ಅವರು ಏ. 14ಕ್ಕೆ ಸಂಜೆ 5 ಗಂಟೆಗೆ ನಾರಾಯಣ ಗುರು ವೃತ್ತದಿಂದ ಆರಂಭಿಸಿ ಪಿವಿಎಸ್‌ ವೃತ್ತದ ಮೂಲಕ ಹಂಪನಕಟ್ಟೆ ಸಿಗ್ನಲ್‌ ತನಕ ಪ್ರಧಾನಿ ನರೇಂದ್ರ ಮೋದಿ ಅವರ ಬೃಹತ್ ರೋಡ್‌ ಶೋ ನಡೆಸುವುದೆಂದು ತೀರ್ಮಾನಿಸಿದ್ದೇವೆ. ಅದಕ್ಕಾಗಿ ಅಗತ್ಯ ಅನುಮತಿಗಳನ್ನು ಪಡೆಯಲಾಗಿದ್ದು, ಭದ್ರತೆಗಾಗಿ ಪೊಲೀಸ್ ಇಲಾಖೆಯ ಜತೆಗೆ ಸಂವಹನ ನಡೆಸಲಾಗಿದೆ ಎಂದು ಸತೀಶ್ ಕುಂಪಲ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಬೇರೆ ಬೇರೆ ಭಾಗಗಳಿಂದ ಕಾರ್ಯಕರ್ತರು, ಬೆಂಬಲಿಗರು ಬಹು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಮೂಡುಬಿದಿರೆ, ಮಂಗಳೂರು ವಿಧಾನಸಭಾ ಕ್ಷೇತ್ರಗಳಿಂದ ಹೆಚ್ಚು ಕಾರ್ಯಕರ್ತರನ್ನು ಸೇರಿಸುವ ಯೋಜನೆ ಮಾಡಲಾಗಿದೆ. ಬೂತ್ ಮಟ್ಟದ ಪಕ್ಷದ ಕಾರ್ಯಗಳು ಪ್ರಗತಿಯಲ್ಲಿರುವ ಕಾರಣ ಉಳಿದ ನಾಲ್ಕು ಕ್ಷೇತ್ರಗಳಿಗೆ ಈ ವಿಷಯದಲ್ಲಿ ಹೆಚ್ಚಿನ ಗುರಿ ನಿಗದಿ ಮಾಡಿಲ್ಲ. ಈ ಭಾಗಗಳಿಂದಲೂ ಬಿಜೆಪಿ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಾಡಲಾಗುವುದು ಎಂದು ಜಿಲ್ಲಾ ಅಧ್ಯಕ್ಷರು ತಿಳಿಸಿದರು.
ಪ್ರಧಾನಿ ಮೋದಿ ಅವರ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಶಾಸಕರು, ಜಿಲ್ಲೆಯ ಎಲ್ಲಾ ಮುಖಂಡರು, ರಾಜ್ಯ ನಾಯಕರು, ಪದಾಧಿಕಾರಿಗಳು, ಹಿತೈಷಿಗಳು ಭಾಗವಹಿಸುತ್ತಾರೆ. ಪಕ್ಷದ ರಾಜ್ಯ ಚುನಾವಣಾ ಸಂಚಾಲಕರಾದ ಜಗದೀಶ್ ಹಿರೇಮನಿಯವರು ಈಗಾಗಲೇ ನಮ್ಮ ಜತೆಗಿದ್ದಾರೆ. ಪ್ರಧಾನಿ ಮೋದಿ ಅವರ ಕಾರ್ಯಕ್ರಮದ ವಿವಿಧ ಜವಾಬ್ದಾರಿಗಳನ್ನು ಹಂಚುವ ಮೂಲಕ ಮೋದಿ ಅವರಿಗೆ ಹೃತ್ಪೂರ್ವಕ ಸ್ವಾಗತ ಕೋರಲು ಸಿದ್ಧತೆ ನಡೆದಿದೆ. ಒಟ್ಟು 2ರಿಂದ 2.5 ಕಿ.ಮೀ ಉದ್ದಕ್ಕೆ ರೋಡ್‌ ಶೋ ನಡೆಯಲಿದೆ ಎಂದು ಸತೀಶ್ ಕುಂಪಲ ತಿಳಿಸಿದರು.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಅವರು ಈಗಾಗಲೇ ಎಲ್ಲ ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರು, ಮತದಾರರ ಒಂದು ಸುತ್ತಿನ ಭೇಟಿಯನ್ನು ಮುಗಿಸಿದ್ದಾರೆ. ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಮಹಿಳಾ ಸಮಾವೇಶ ಪೂರ್ಣಗೊಂಡಿದೆ. ನಿಗದಿತ ಯೋಜನೆಯಂತೆ ಪ್ರಚಾರ ಕಾರ್ಯ ನಡೆಯುತ್ತಿದೆ ಎಂದು ಸತೀಶ್ ಕುಂಪಲ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಚುನಾವಣಾ ಸಂಚಾಲಕ ಜಗದೀಶ್ ಹಿರೇಮನಿ, ಜಿಲ್ಲಾ ಚುನಾವಣಾ ಸಂಚಾಲಕ ನಿತಿನ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವಾರ, ಬಂಟ್ವಾಳ ಕ್ಷೇತ್ರದ ಚುನಾವಣಾ ಉಸ್ತುವಾರಿ ಜಗದೀಶ್ ಶೇಣವ, ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದ್ರೆ, ಹಾಗೂ ಕಸ್ತೂರಿ ಪಂಜ ಅವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles