ಮಂಗಳೂರು: ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕಾರ್ಮಿಕ ಇಲಾಖೆ ಹಾಗೂ ಬಾಲಕಾರ್ಮಿಕ ಯೋಜನಾ ಸಂಘದ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪಯೋಜನೆಯಡಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಹಾಗೂ ಮಾನವ ಕಳ್ಳ ಸಾಗಣಿಕೆ ತಡೆ ಕಾಯ್ದೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮಾ.6 ರಂದು ಬುಧವಾರ ನಗರದ ಶರಬತ್ ಕಟ್ಟೆಯಲ್ಲಿರುವ ಕಾರ್ಮಿಕ ಭವನದಲ್ಲಿ ಜನಜಾಗೃತಿ ರಥಕ್ಕೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿಗಳಾದ ಶೋಭಾ ಬಿ.ಜಿ ಅವರು ಚಾಲನೆ ನೀಡಿದರು.
ಮಂಗಳೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ಶಿವಕುಮಾರ್ ಬಿ.ಈ ಅಧ್ಯಕ್ಷತೆ ವಹಿಸಿದರು. ಕಾರ್ಮಿಕ ಅಧಿಕಾರಿ ಕಾವೇರಿ ಟಿ., ವಿಲ್ಮಾ ಎಲಿಜಬೆತ್ ತೌವ್ರೋ ಮತ್ತು ಯೋಜನಾ ನಿರ್ದೇಶಕ ಶ್ರೀನಿವಾಸ್ ನಾಯಕ್ ಹಾಗೂ ಹಿರಿಯ ಕಾರ್ಮಿಕ ನಿರೀಕ್ಷಕರು, 1,2,3 ಮತ್ತು 4ನೇ ವೃತ್ತ, ಮಂಗಳೂರು ಇವರು ಉಪಸ್ಥಿತರಿದ್ದರು.
ಜನಜಾಗೃತಿ ರಥವು ದಕ್ಷಿಣ ಕನ್ನಡ ಜಿಲ್ಲಾಯಾದ್ಯಂತ ಮಾರ್ಚ್ 6 ರಿಂದ 11 ರವರೆಗೆ ಸಂಚರಿಸಲಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದವರು ವಾಸಿಸುವ ಕಾಲೋನಿಗಳಲ್ಲಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಹಾಗೂ ಮಾನವ ಕಳ್ಳ ಸಾಗಣಿಕೆ ತಡೆ ಕಾಯ್ದೆಯ ಬಗ್ಗೆ ಜನಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿರುವುದಾಗಿ ಸಹಾಯಕ ಕಾರ್ಮಿಕ ಆಯುಕ್ತರು ತಿಳಿಸಿದ್ದಾರೆ.
