ಮಂಗಳೂರು: ದೇಶದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದೆ. ಪ್ರತಿದಿನ ಸರಾಸರಿ 42
ಲೈಂಗಿಕ ದೌರ್ಜನ್ಯದ ಪ್ರಕರಣಗಳು ದಾಖಲಾಗುತ್ತಿದೆ. ಲೈಂಗಿಕ ಶಿಕ್ಷಣವನ್ನು ಚಿಕ್ಕ ವಯಸ್ಸಿನಿಂದಲೇ ನೀಡದೇ
ಇರುವುದೇ ದೌರ್ಜನ್ಯಕ್ಕೆ ಮೂಲ ಕಾರಣ ಎಂದು ಹಿರಿಯ ಬರಹಗಾರ್ತಿ ಮತ್ತು ಬೆಸೆಂಟ್ ಮಹಿಳಾ ಕಾಲೇಜಿನ
ನಿವೃತ್ತ ಪ್ರಾಧ್ಯಾಪಕಿ ಡಾ. ಮೀನಾಕ್ಷಿ ರಾಮಚಂದ್ರ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಸ್ಪರ್ಶ್, ಮಹಿಳಾ ಕೋಶ,
ಮಹಿಳಾ ವೇದಿಕೆ, ಆಂತರಿಕ ದೂರು ಸಮಿತಿ, ಆಂತರಿಕ ಗುಣಮಟ್ಟ ಖಾತರಿ ಕೋಶ, ಪತ್ರಿಕೋದ್ಯಮ ಮತ್ತು
ಸಮಾಜಶಾಸ್ತ್ರ ವಿಭಾಗಗಳ ಸಹಯೋಗದಲ್ಲಿ ನಡೆದ “ಕೆಲಸದ ಸ್ಥಳದಲ್ಲಿನ ಲೈಂಗಿಕ ದೌರ್ಜ್ಯನ್ಯ: ಜಾಗೃತಿ
ಮತ್ತು ತಡೆಗಟ್ಟುವಿಕೆ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾಗರಿಕ, ಬುದ್ಧಿವಂತ ಎಂದೆನಿಸಿಕೊಂಡ ಮನುಷ್ಯನೇ ಕಾಮದ ವಿಷಯದಲ್ಲಿ ಪ್ರಾಣಿಗಳಿಗಿಂತಲೂ ಕ್ರೂರವಾಗಿ
ವರ್ತಿಸುತ್ತಾನೆ. ಲೈಂಗಿಕ ದೌರ್ಜನ್ಯ ಎಂಬುದು ಇಂದು ನಿನ್ನೆಯದಲ್ಲ. ಇದಕ್ಕೆ ಪೌರಾಣಿಕ ಹಾಗೂ
ಐತಿಹಾಸಿಕದ ಹಿನ್ನಲೆಯಿದೆ. ಸಮಾಜದಲ್ಲಿ ಕೇವಲ ಹೆಣ್ಣು ಮಕ್ಕಳು ಮಾತ್ರವಲ್ಲ; ಗಂಡು ಮಕ್ಕಳು ಕೂಡ
ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಹೆಣ್ಣುಮಕ್ಕಳ ನಾಪತ್ತೆ, ಕೌಟುಂಬಿಕ ಕಲಹ, ಪ್ರೀತಿ-ಪ್ರೇಮದಲ್ಲಿ ಮೋಸ,
ವೇಶ್ಯಾವಾಟಿಕೆ ಇಂತಹ ಮೊದಲಾದ ಎಲ್ಲಾ ಪ್ರಕರಣಗಳ ಹಿಂದಿನ ಉದ್ದೇಶ ಲೈಂಗಿಕತೆಯೇ ಆಗಿರುವುದು
ವಿಷಾದನೀಯ ಎಂದರು.
ಆಧುನಿಕ ಸಮಾಜದಲ್ಲಿ ಕುಂಠಿತಗೊಂಡಿರುವ ನೈತಿಕತೆ, ವ್ಯವಸ್ಥೆಯ ಸೋಲು, ಕಠಿಣ ಕಾನೂನು ಕ್ರಮಗಳನ್ನು
ಜರುಗಿಸದೇ ಇರುವುದು ಹಾಗೂ ಲೈಂಗಿಕ ವಿಷಯಕ್ಕೆ ಸಂಬಂಧಿಸಿದಂತೆ ಸೂಕ್ತ ರೀತಿಯಲ್ಲಿ ಕಾನೂನು ಪಾಲನೆ
ಆಗದಿರುವುದು ಲೈಂಗಿಕ ದೌರ್ಜನ್ಯಗಳಿಗೆ ಕಾರಣವಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, ಲೈಂಗಿಕ ದೌರ್ಜನ್ಯ
ಎನ್ನುವುದು ಕೇವಲ ಹೆಣ್ಣು ಮಕ್ಕಳ ಮೇಲೆ ಮಾತ್ರ ಆಗುವುದಿಲ್ಲ. ಗಂಡು ಮಕ್ಕಳ ಮೇಲೂ
ದೌರ್ಜನ್ಯಗಳಾಗುತ್ತಿದೆ. ಯುವಜನತೆ ಈ ವಿಚಾರದಲ್ಲಿ ಶಿಕ್ಷಿತರಾಗುವುದು ಇಂದಿನ ಅಗತ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆಂತರಿಕ ದೂರು ಸಮಿತಿ ಸಂಚಾಲಕಿ ಪ್ರೊ. ಕೆ. ಆರ್. ಶಾನಿ, ಸ್ಪರ್ಶ್ ಸಮಿತಿ ಸಂಚಾಲಕಿ
ಡಾ. ಉಷಾ ಕೆ. ಎಂ., ಮಹಿಳಾ ಕೋಶದ ಸಂಚಾಲಕಿ ಡಾ. ಶೋಭಾ, ಮಹಿಳಾ ವೇದಿಕೆ ಸಂಚಾಲಕಿ ಡಾ. ಭಾರತಿ
ಪ್ರಕಾಶ್, ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ. ಗಾಯತ್ರಿ ಎನ್. ಹಾಗೂ ಇತರೆ ವಿಭಾಗಗಳ ಉಪನ್ಯಾಸಕರು
ಉಪಸ್ಥಿತರಿದ್ದರು.