ಮಂಗಳೂರು: ಬಸವಣ್ಣ ನವರ ವಚನಗಳು, ತತ್ವಗಳು ಎಲ್ಲರಿಗೂ ಮಾದರಿ. ನಾವೆಲ್ಲರೂ ಅವುಗಳನ್ನು ಅನುಸರಿಸೋಣ ಎಂದು ಅಪರ ಜಿಲ್ಲಾಧಿಕಾರಿ ಡಾ. ಜಿ ಸಂತೋಷ್ ಕುಮಾರ್ ಅವರು ಹೇಳಿದರು.
ಅವರು ಮೇ. 10ರ ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. 12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪವನ್ನು ಸ್ಥಾಪಿಸುವ ಮೂಲಕ ಇಂದಿನ ಸಾಮಾಜಿಕ-ಧಾರ್ಮಿಕ ಸಂಸತ್ತು ಆಡಳಿತವನ್ನು ಅಂದಿನ ಕಾಲದಲ್ಲಿಯೇ ಕಾರ್ಯರೂಪಕ್ಕೆ ತಂದರು ಎಂದು ಹೇಳಿದರು.ಬಸವಣ್ಣನವರ ವಚನಗಳು, ತತ್ವಗಳು ಕೇವಲ ಒಂದೇ ಸಮಾಜಕ್ಕೆ ಸೀಮಿತವಾದದ್ದಲ್ಲ ಉತ್ತಮ ಜೀವನಕ್ಕಾಗಿ ಅವರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ಜಯಂತಿಯ ಆಚರಣೆಯ ಉದ್ದೇಶ ನೆರವೇರಿದಂತೆ ಎಂದರು.
ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ಬಸವ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಕರಾವಳಿ ವೀರಶೈವ ಲಿಂಗಾಯಿತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್. ಎಸ್ ಗುರುಮೂರ್ತಿ, ಪ್ರದಾನ ಕಾರ್ಯದರ್ಶಿ ಚನ್ನಬಸಪ್ಪ ರೋಡ್ಡಿ, ನಿರ್ದೇಶಕರುಗಳಾದ ಎಚ್. ಎಸ್ ರುದ್ರಪ್ಪ, ಚೆನ್ನೇಶ್, ಸಿದ್ದೇಶ್ ಎಸ್. ಎಚ್, ಷಣ್ಮುಗ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜೇಶ್. ಜಿ ಸ್ವಾಗತಿಸಿದರು.