ಮಂಗಳೂರು : ಕರಾವಳಿ ಉತ್ಸವದ ಅಂಗವಾಗಿ ತಣ್ಣೀರುಬಾವಿ ಬೀಚ್‌ನಲ್ಲಿ ಡಿ. 28 ಮತ್ತು 29ರಂದು ಆಯೋಜಿಸಲಾಗಿರುವ ಬೀಚ್ ಉತ್ಸವಕ್ಕೆ ಸಿದ್ಧತೆ ನಡೆಸಲಾಗಿದ್ದು, ಸ್ಥಳೀಯ ಕಲಾವಿದರ ಕಲಾ ಪ್ರದರ್ಶನದೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯಲಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಡಿ. 28ರಂದು 6.30ಕ್ಕೆ ವಿಧಾನಸಭೆ ಸ್ಪೀಕರ್ ಬೀಚ್ ಉತ್ಸವವನ್ನು ಅಧಿಕೃತವಾಗಿ ಉದ್ಘಾಟಿಸುವರು ಎಂದರು.
7.30ರಿ೦ದ ಕದ್ರಿ ಮಣಿಕಂಠರವರಿ೦ದ ಕಾರ್ಯಕ್ರಮ ನಡೆಯಲಿದ್ದು, ವಿವಿಧ ರೀತಿಯ ಜಲ ಸಾಹಸ ಕ್ರೀಡೆಗಳು ಹಾಗೂ ಆಹಾರ ಮಳಿಗೆಗಳು ಪ್ರವಾಸಿಗರು ಸೇರಿದಂತೆ ವರ್ಷಾಂತ್ಯವನ್ನು ಸಂಭ್ರಮಿಸಲು ಭೇಟಿ ನೀಡುವ ಸ್ಥಳೀಯರಿಗೆ ಎಲ್ಲಾ ರೀತಿಯ ಮನರಂಜನೆಯನ್ನು ಒದಗಿಸಲಿದೆ ಎಂದು ಅವರು ಹೇಳಿದರು.
ಬೀಚ್ ಉತ್ಸವ ಸಮಿತಿಯ ಅಧ್ಯಕ್ಷರೂ ಹಾಗೂ ಪೊಲೀಸ್ ಆಯುಕ್ತರೂ ಆಗಿರುವ ಅನುಪಮ್ ಅಗ್ರವಾಲ್ ಮಾತನಾಡಿ, ಬೀಚ್ ಉತ್ಸವ ನಡೆಯಲಿರುವ ತಣ್ಣೀರುಬಾವಿ ರಸ್ತೆಯುದ್ದಕ್ಕೂ ನಿಲ್ಲಿಸಲಾಗುವ ಘನ ವಾಹನಗಳನ್ನು ಉತ್ಸವದ ದಿನಗಳಂದು ತೆರವುಗೊಳಿಸಲು ಸೂಚಿಸಲಾಗಿದೆ. ಬೀಚ್‌ನ ದಾರಿಯಲ್ಲಿ ಐದಾರು ಕಡೆಗಳಲ್ಲಿ ದ್ವಿಚಕ್ರ, ಚತುಷ್ಚಕ್ರ ಹಾಗೂ ಇತರ ವಾಹನಗಳ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ಸುಲ್ತಾನ್ ಬತ್ತೇರಿಯಿಂದ ತಣ್ಣೀರುಬಾವಿಗೆ ಉತ್ಸವದ ದಿನಗಳಲ್ಲಿ ಫರ‍್ರಿ ಸೇವೆಯನ್ನು ಹೆಚ್ಚುಗೊಳಿಸಲು ಕ್ರಮ ವಹಿಸಲಾಗಿದೆ. ಫರ‍್ರಿಯಲ್ಲಿ ಆಗಮಿಸುವವರಿಗೆ ಅಲ್ಲಿಂದ ತಣ್ಣೀರುಬಾವಿವರೆಗಿನ ಸುಮಾರು ಒಂದು ಕಿ.ಮೀ. ರಸ್ತೆಗೆ ಮಿನಿ ಬಸ್ ಸೇವೆ ಒದಗಿಸಲು ಕ್ರಮ ವಹಿಸಲಾಗಿದೆ. ಉತ್ಸವದ ಸಂದರ್ಭ ಬೀಚ್‌ನಲ್ಲಿ ಹೆಚ್ಚಿನ ಸಿಬ್ಬಂದಿ ಮೂಲಕ ಭದ್ರತಾ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.
ಗೋಷ್ಟಿಯಲ್ಲಿ ಮುಡಾ ಆಯುಕ್ತೆ ನೂರ್ ಜಹರಾ ಖಾನಂ, ವಾರ್ತಾಧಿಕಾರಿ ಖಾದರ್ ಷಾ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಉಪಸ್ಥಿತರಿದ್ದರು.
ಮಂಗಳೂರು ನಗರ ವೇಗವಾಗಿ ಬೆಳೆಯುತ್ತಿದ್ದು, ನಗರಕ್ಕೆ ಪ್ರವಾಸಿಗರನ್ನು ಆಕರ್ಷಿಸುವ ಹಾಗೂ ಬ್ರಾಂಡ್ ಮಂಗಳೂರು ಆಗಿ ನಗರವನ್ನು ಪ್ರೋತ್ಸಾಹಿಸುವ ಈ ಬೀಚ್ ಉತ್ಸವಕ್ಕೆ ಬೆಂಬಲ ನೀಡಲಾಗುತ್ತಿದೆ ಎಂದು ಬೀಚ್ ಉತ್ಸವದ ಪ್ರಾಯೋಜಕತ್ವ ವಹಿಸಿರುವ ರೋಹನ್ ಕಾರ್ಪೊರೇಶನ್ ಮುಖ್ಯಸ್ಥ ರೋಹನ್ ಮೊಂತೆರೋ ತಿಳಿಸಿದರು.