ಬೆಳ್ತಂಗಡಿ: ಸಾಹಿತ್ಯ ಅಕಾಡೆಮಿ, ಹೊಸದೆಹಲಿ ಮತ್ತು ಮಂಗ್ಳುರ್ಚಿ ಮೊತಿಯಾಂ ಸಾಂಸ್ಕೃತಿಕ ಸಂಘಟನೆಯ ಜಂಟಿ ಆಶ್ರಯದಲ್ಲಿ ಬೆಳ್ತಂಗಡಿ ಪ್ರಧಾನ ರಸ್ತೆಯ ಲೋಬೊ ಮೋಟಾರ್ಸ್ ಆವರಣದಲ್ಲಿ ಗ್ರಾಮಲೋಕ ಕಾರ್ಯಕ್ರಮ ನಡೆಯಿತು.
ಬೆಳ್ತಂಗಡಿ ಧರ್ಮಕ್ಷೇತ್ರದ ಪ್ರಧಾನ ಧರ್ಮಗುರು ಫಾ| ವಾಲ್ಟರ್ ಡಿಮೆಲ್ಲೊ ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
“ಕೊಂಕಣಿ ಭಾಷೆ ವೈವಿಧ್ಯತೆಗಳಿಂದ ಕೂಡಿದ ಎಲ್ಲರನ್ನೂ ಒಳಗೊಳ್ಳುವ ಪ್ರೀತಿಯ ಭಾಷೆ. ವೈಶಿಷ್ಠ್ಯಪೂರ್ಣ ಜಾನಪದ ಮತ್ತು ಗುಣಮಟ್ಟದ ಸಾಹಿತ್ಯ ಪರಂಪರೆ ಕೊಂಕಣಿಗೆ ಭಾಷೆಗೆ ಬಳುವಳಿಯಾಗಿ ಲಭಿಸಿದೆ. ಕೊಂಕಣಿ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವುದರ ಜತೆಗೆ, ಕೊಂಕಣಿ ಭಾಷೆಯಲ್ಲಿ ಪರಕೀಯ ಶಬ್ದಗಳ ನುಸುಳುವಿಕೆಯನ್ನು ತಡೆದು ವಿಶಿಷ್ಠತೆಯನ್ನು ಕಾಪಾಡುವ ಜವಾಬ್ದಾರಿಯೂ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ಹಿರಿಯ ಕೊಂಕಣಿ ಸಾಹಿತಿಗಳು, ಕಲಾವಿದರಿಂದ ಜಾಗೃತಿ ಮೂಡಿಸುವ ಕೆಲಸಗಳಾಗಬೇಕು” ಎಂದವರು ಕರೆಕೊಟ್ಟರು.
ಕೇಂದ್ರ ಸಾಹಿತ್ಯ ಅಕಾಡೆಮಿ ಕೊಂಕಣಿ ವಿಭಾಗ ಮುಖ್ಯಸ್ಥ ಕವಿ ಮೆಲ್ವಿನ್ ರೊಡ್ರಿಗಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೇಂದ್ರ ಸಾಹಿತ್ಯ ಅಕಾಡೆಮಿ, ಕೊಂಕಣಿ ಸಲಹಾ ಸಮಿತಿ ಸದಸ್ಯ ಎಚ್. ಎಂ. ಪೆರ್ನಾಲ್ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಲೋಕ ಕಾರ್ಯಕ್ರಮದಲ್ಲಿ ಸ್ಥಳೀಯ ಕವಿಗಳಾದ ರೋಬರ್ಟ್ ಡಿ ಸೊಜಾ ಮಡಂತ್ಯಾರ್, ಫ್ಲಾವಿಯಾ ಅಲ್ಬುಕೆರ್ಕ್, ಪುತ್ತೂರ್, ತೆಲ್ಮಾ ಮಾಡ್ತಾ, ಮಡಂತ್ಯಾರ್ ಸ್ವರಚಿತ ಕವಿತೆಗಳನ್ನು ವಾಚಿಸಿದರು. ಗುರುವಾಯನಕೆರೆಯ ವಿದ್ಯಾ ನಾಯಕ್ ಕೊಂಕಣಿ ಶಿಶುಗೀತೆಗಳನ್ನು ಪ್ರಸ್ತುತಪಡಿಸಿ, ಶಿಶುಗೀತೆಗಳ ಹಿನ್ನೆಲೆ, ಔಚಿತ್ಯ ಮತ್ತು ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದರು. ಅಪೊಲಿನ್ ಡಿ ಸೊಜಾ ಮತ್ತು ತಂಡದವರು ಕೊಂಕಣಿ ಜೋಗುಳ ಹಾಡುಗಳನ್ನು ಹಾಡಿದರು. ರೊನಾಲ್ಡ್ ಲೋಬೊ, ರೊನಾಲ್ದ್ ಡಿ ಸೊಜಾ ಮತ್ತು ಆರ್ವಿನ್ ಡಿ ಸೊಜಾ ಕೊಂಕಣಿ ಹಾಡುಗಳನ್ನು ಹಾಡಿದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಕೊಂಕಣಿ ಸಲಹಾ ಸಮಿತಿಯ ಸದಸ್ಯ ಸ್ಟ್ಯಾನಿ ಬೇಳ ಕಾರ್ಯಕ್ರಮ ನಿರೂಪಿಸಿದರು. ಮಂಗ್ಳುರ್ಚಿ ಮೊತಿಯಾಂ ಸಂಘಟನೆಯ ವತಿಯಿಂದ ಅಲ್ಪೋನ್ಸ್ ಮೆಂಡೋನ್ಸಾ ವಂದಿಸಿದರು.