ಮ೦ಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಹಲವು ಮಹತ್ವಕಾಂಕ್ಷೆ ಯೋಜನೆಗಳು ಎಲ್ಲೆಡೆ ತಲುಪಬೇಕು ಎಂಬ ಸದುದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಂಚರಿಸಲಿರುವ “ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ” ನಗರದ ಪುರಭವನದ ಬಳಿ ಭಾನುವಾರ ಮುಂಜಾನೆ ಶಾಸಕ ವೇದವ್ಯಾಸ್ ಕಾಮತ್ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಸನ್ಮಾನ್ಯ ಮೋದಿಯವರ ಕನಸಿನ ಕಾರ್ಯಕ್ರಮವಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಲು ಈ ಯಾತ್ರೆ ನಡೆಸಲಾಗುತ್ತಿದೆ. ಪ್ರಧಾನಿಯವರು ದೇಶದ ಜನತೆಗಾಗಿ ಆರಂಭಿಸಿರುವ ಯೋಜನೆಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಬೇಕು, ಹಾಗಾಗಿ ಈ ಯೋಜನೆಗಳ ಸಂಕ್ಷಿಪ್ತ ಮಾಹಿತಿ ಹೊಂದಿರುವ ಯಾತ್ರೆಯು ಗ್ರಾಮೀಣ ಭಾಗವೂ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಸಂಚರಿಸಲಿದೆ ಎಂದು ಮಾಹಿತಿ ನೀಡಿದರು.
ಕೇಂದ್ರ ಸರ್ಕಾರದ ಜನಪರ ಯೋಜನೆಗಳಾದ ಆಯುಷ್ಮಾನ್ ಭಾರತ್, ಜಲ ಜೀವನ ಮಿಷನ್, ದೀನದಯಾಳ್ ಅಂತ್ಯೋದಯ ಯೋಜನೆ, ಪಿಎಂ ಉಜ್ವಲ ಯೋಜನೆ, ಜನ್ ಧನ್ ಯೋಜನೆ ಸೇರಿದಂತೆ ಹಲವು ಯೋಜನೆಗಳು ನೇರವಾಗಿ ಫಲಾನುಭವಿಗಳಿಗೆ ಮುಟ್ಟಿಸುವ ಕೆಲಸ ಮಾಡಲಾಗುತ್ತಿದೆ. ಈ ಮೂಲಕ ಭಾರತವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಲಾಗುತ್ತಿದೆ ಎಂದು ಶಾಸಕರು ಹೇಳಿದರು
