ಮಂಗಳೂರು: ಪದವು ಬಿಕರ್ನಕಟ್ಟೆಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಗಳನ್ನು ಶಾಸಕ ಡಿ.ವೇದವ್ಯಾಸ ಕಾಮತ್ ಅವರು ಶನಿವಾರ ಲೋಕಾರ್ಪಣೆಗೊಳಿಸಿದರು. ಬಳಿಕ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ‘ನನ್ನನ್ನು ಸೇರಿ ಎಲ್ಲ ಗಣ್ಯರು ಸರ್ಕಾರಿ ಶಾಲೆಯಲ್ಲಿ ಕಲಿತವರೇ. ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಯಲ್ಲಿ ಕಲಿತವರು ಸಮಾಜಕ್ಕೆ ಬೇರೆ ಬೇರೆ ರೀತಿಯ ಕೊಡುಗೆ ನೀಡಿದ್ದಾರೆ. ದೇಶ ವಿದೇಶಗಳಲ್ಲಿ ಉತ್ತಮ ಉದ್ಯೊಗ ಗಿಟ್ಟಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ. ಅಂತೆಯೇ ಈ ಶಾಲೆಯ ಹಳೆ ವಿದ್ಯಾರ್ಥಿಗಳು ಈ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗೆ ಕೊಡುಗೆ ನೀಡುವ ಗೌರವ ಸ್ಥಾನದಲ್ಲಿದ್ದಾರೆ’ ಎಂದರು.
‘ಈ ಶಾಲೆಯ ಅಭಿವೃದ್ಧಿಗೆ ಸಿಎಸ್ ಆರ್ ನಿಧಿ ಅಡಿ ₹ 10 ಲಕ್ಷ ಒದಗಿಸಿದ್ದೇವೆ. ಇಲ್ಲಿ ಪಾಲಿಕೆ ಅನುದಾನದಲ್ಲಿ ಹೈಮಾಸ್ಟ್ ದೀಪ ಅಳವಡಿಸಿದ್ದೇವೆ. ತಡೆಗೋಡೆ ಕಟ್ಟಿಸಿಕೊಟ್ಟಿದ್ದೇವೆ. ಈ ವರ್ಷ ಎರಡು ಕೊಠಡಿಗಳನ್ನು ವಿವೇಕ ಯೋಜನೆ ಅಡಿ ₹40 ಲಕ್ಷ ಅನುದಾನದಲ್ಲಿ ನಿರ್ಮಿಸಿದ್ದೇವೆ. ಇಲ್ಲಿಗೆ ಇಂಟರ್ ಲಾಕ್ ಅಳವಡಿಸಲು ಮತ್ತು ವೇದಿಕೆ ದುರಸ್ತಿಗೆ ₹ 15 ಲಕ್ಷ ಮಂಜೂರಾಗಿದೆ. ಎಲ್ಲ ಸೇರಿ ಈ ಶಾಲೆಗೆ ₹ 1ಕೋಟಿಗೂ ಅಧಿಕ ಅನುದಾನ ಒದಗಿಸಿದ್ದೇವೆ’ ಎಂದರು.
‘ಕೆಲ ವರ್ಷಗಳ ಹಿಂದೆ ಈ ಶಾಲೆಯಲ್ಲಿ 68 ಮಕ್ಕಳು ಮಾತ್ರ ಇದ್ದರು. ಮುಖ್ಯೋಪಾಧ್ಯಾಯಿನಿ ರಾಜೀವಿ ಅವರ ನೇತೃತ್ವದ ಶಿಕ್ಷಕರ ತಂಡ ಮನೆ ಮನೆಗೆ ಹೋಗಿ ಪೋಷಕರಿಗೆ ಮನವರಿಕೆ ಮಾಡಿದ್ದರಿಂದ ಈಗ ವಿದ್ಯಾರ್ಥಿಗಳ ಸಂಖ್ಯೆ 268ಕ್ಕೆ ಹೆಚ್ಚಳವಾಗಿದೆ. ಈ ಸರ್ಕಾರಿ ಶಾಖೆಯಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಆರಂಭಿಸಲಾಗಿದೆ” ಎಂದರು.
ಅಧ್ಯಕ್ಷತೆ ವಹಿಸಿದ್ದ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ‘ಗರಿಷ್ಠ ಸಂಖ್ಯೆಯಲ್ಲಿ ವಿದ್ಯಾರ್ಥಿ ಗಳನ್ನು ಹೊಂದಿರುವ ನಗರದ ಸರ್ಕಾರಿ ಶಾಲೆಗಳಲ್ಲಿ ಇದೂ ಒಂದು. ಕನ್ನಡ ಮಾಧ್ಯಮ ಶಾಲೆಯಲ್ಲೇ ಕಲಿತ ನಮಗೆ ವಿದ್ಯಾರ್ಥಿ ಜೀವನದ ಎಲ್ಲ ಒಳ್ಳೆಯ ಅನುಭವ ಸಿಕ್ಕಿದೆ. ಕಷ್ಟದ ಅರಿವು ನಮಗಿದೆ. ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬೆಳೆಯಲು ತಳಹದಿ ಸಿಗುವುದು ಕನ್ನಡ ಶಾಲೆಗಳಲ್ಲಿ’ ಎಂದರು.
‘ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳಲ್ಲಿ ಆತ್ಮೀಯತೆಯ ಕೊರತೆ ಇರುತ್ತದೆ. ಗುರು ಹಿರಿಯರನ್ನು, ತಂದೆ ತಾಯಿಗಳನ್ನು ಗೌರವಿಸುವ ಗುಣ ಇರುವುದು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಲ್ಲಿ’ ಎಂದರು.
ವರದಿ ವಾಚಿಸಿದ ಮುಖ್ಯೋಪಾಧ್ಯಾಯಿನಿ ರಾಜೀವಿ ‘ಕಾಗ್ನಿಜಂಟ್ ಸಂಸ್ಥೆ ಯವರ ವತಿಯಿಂದ ಶಾಲೆಯ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿ ನೀಡಲಾಗುತ್ತಿದೆ. ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗೂ ಉತ್ತೇಜನ ನೀಡಲಾಗುತ್ತಿದೆ. ಕನ್ನಡ ಮಾಧ್ಯಮದ ಜೊತೆ ಇಂಗ್ಲಿಷ್ ಮಾಧ್ಯಮದಲ್ಲೂ ಶಿಕ್ಷಣ ನೀಡಲಾಗುತ್ತಿದೆ. ಒಟ್ಟು 268 ವಿದ್ಯಾರ್ಥಿಗಳು 10 ವಿಭಾಗಗಳಲ್ಲಿ ಕಲಿಯುತ್ತಿದ್ದಾರೆ.
ಪಾಲಿಕೆ ಸದಸ್ಯೆ ಕಾವ್ಯಾ ನಟರಾಜ್ ಆಳ್ವ, ವೈದ್ಯ ಡಾ.ಗಣೇಶ್ ಕುಮಾರ್, ಸಿವಿಲ್ ಎಂಜಿನಿಯರ್ ಗುರುರಾಜ್ ಶೆಣೈ, ಉದ್ಯಮಿ ಯೋಗೀಶ್ ಶೆಣೈ, ಶಾಲಾ ಎಸ್ ಡಿಎಂಸಿ ಅಧ್ಯಕ್ಷೆ ಜಯಲತಾ ಅಮೀನ್,ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಸಂಜೀವ ಭಾಗವಹಿಸಿದ್ದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಶೈಲಜಾ ಸುರೇಶ್ ಸ್ವಾಗತಿಸಿದರು. ಕಾರ್ಯದರ್ಶಿ ರಮೇಶ್ ಕಂಡೆಟ್ಟು ವಂದಿಸಿದರು.
ಶಾಲೆಯಲ್ಲಿ ಅಧ್ಯಾಪಕಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾಗಿರುವ ವೀಣಾ ಪ್ರಭು ಅವರಿಗೆ ಶಾಲೆಯ ಎಸ್ಡಿಎಂಸಿ ವತಿಯಿಂದ ಗುರುವಂದನೆ ಸಲ್ಲಿಸಲಾಯಿತು. ಶಾಲೆಯ ಹಿತೈಷಿ ಮಹಮ್ಮದ್ ನೌಷಾದ್ ಅವರನ್ನು ಸನ್ಮಾನಿಸಲಾಯಿತು.ಅಧ್ಯಾಪಕರಾದ ಶೀಲಾವತಿ ಹಾಗೂ ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು. ಶನಿವಾರ ಬೆಳಿಗ್ಗೆ ಎಸ್ಡಿಎಂಸಿ ಆಧ್ಯಕ್ಷೆ ಜಯಲತಾ ಅಮೀನ್ ಶಾಲಾ ಧ್ವಜಾರೋಹಣ ನೆರವೇರಿಸಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಿತು.ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ಈಶ್ವರ್, ನಿವೃತ್ತ ಶಿಕ್ಷಕ ಮಹಾಬಲ ಕುಲಾಲ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಶೈಲಜಾ ಸುರೇಶ್, ಗೌರವಾಧ್ಯಕ್ಷ ಸಂಜೀವ, ಸಮೂಹ ಸಂಪನ್ಮೂಲ ಅಧಿಕಾರಿ ಕುಮುದಿನಿ, ವಕೀಲ ಮಹೇಶ್ ಜೋಗಿ ಭಾಗವಹಿಸಿದ್ದರು. ಸ್ಥಳೀಯ ಪಾಲಿಕೆ ಸದಸ್ಯೆ ಕಾವ್ಯಾ ನಟರಾಜ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯರಾದ ರಾಜೀವಿ ಸ್ವಾಗತಿಸಿದರು.ಹಳೆ ವಿದ್ಯಾರ್ಥಿ ಸಂಘದ ಜತೆ ಕಾರ್ಯದರ್ಶಿ ದೇವದಾಸ್ ವಂದಿಸಿದರು.