ಮಂಗಳೂರು: ದೇಶದ ಅಖಂಡತೆಗೆ ಹಾಗೂ ಸಾರ್ವಭೌಮತ್ವಕ್ಕೆ ತಮ್ಮ ಬದುಕನ್ನೇ ಸಮರ್ಪಿಸಿದ ಭಾರತೀಯ ಜನಸಂಘದ ಸ್ಥಾಪಕರಾದ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿಯವರ ಜನ್ಮದಿನ ಹಾಗೂ ಪುಣ್ಯಸ್ಮರಣೆಯ ಅಂಗವಾಗಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ಎಸ್ಸಿ ಮೋರ್ಚಾ ವತಿಯಿಂದ ಸೂಟರ್ ಪೇಟೆಯ ಸಮಾಜ ಭವನದಲ್ಲಿ ವಿವಿಧ ಸರ್ಕಾರಿ ಯೋಜನೆಗಳ ಮಾಹಿತಿ ಹಾಗೂ ಅರ್ಜಿ ಸಲ್ಲಿಕೆ ಕಾರ್ಯಕ್ರಮವು ನಡೆಯಿತು.
ಜನಸಾಮಾನ್ಯರಿಗೆ ತೀರಾ ಅಗತ್ಯವಿರುವ ಬ್ಯಾಂಕ್ ಖಾತೆ ತೆರೆಯುವುದು, ಸಂಧ್ಯಾ ಸುರಕ್ಷಾ ಯೋಜನೆ, ವೃದ್ಧಾಪ್ಯ ಪಿಂಚಣಿ, ಕಾರ್ಮಿಕ ಇಲಾಖೆ ಕಾರ್ಡ್, ಆಯುಷ್ಮಾನ್ ಕಾರ್ಡ್, ಜಾತಿ ಹಾಗೂ ಆದಾಯ, ನಗರ ಪಾಲಿಕೆ ಸೇರಿದಂತೆ ಹಲವು ಯೋಜನೆಗಳ ಮಾಹಿತಿ ನೀಡಿ ನೂರಾರು ಜನರ ಅರ್ಜಿ ಸಲ್ಲಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು, ರಾಷ್ಟ್ರೀಯ ವಿಚಾರಧಾರೆಯ ಭಾರತೀಯ ಜನಸಂಘವನ್ನು ಸ್ಥಾಪಿಸಿ ನಮ್ಮೆಲ್ಲರನ್ನು ಒಂದು ತತ್ವಸಿದ್ಧಾಂತದಡಿ ತಂದವರು ಡಾ.ಶ್ಯಾಮ್ ಪ್ರಸಾದ್ ಮುಖರ್ಜಿಯವರು. ದೇಶಕ್ಕಾಗಿ ಅವರು ತಮ್ಮ ಬದುಕನ್ನೇ ಪಣವಾಗಿಟ್ಟಿದ್ದಲ್ಲದೇ, ಬಲಿದಾನವೂಗೈದರು. ಮುಖರ್ಜಿಯವರ ತ್ಯಾಗ, ಬಲಿದಾನ ಮತ್ತು ಬದ್ಧತೆ ನಮಗೆಲ್ಲ ಆದರ್ಶ. ದೇಶಾದ್ಯಂತ ಅವರ ಹೆಸರಿನಲ್ಲಿ ನಡೆಯುತ್ತಿರುವ ಸಾಮಾಜಿಕ ಕಾರ್ಯಗಳು ನಿತ್ಯ ನಿರಂತರವಾಗಿರಲಿ ಎಂದರು.
ರಮೇಶ್ ಕಂಡೆಟ್ಟು, ನಿತಿನ್ ಕುಮಾರ್, ಮೋಹನ್ ಪೂಜಾರಿ, ಮನಪಾ ಸದಸ್ಯರುಗಳಾದ ಭರತ್ ಕುಮಾರ್ ಸೂಟರ್ ಪೇಟೆ, ಶೈಲೇಶ್, ವೀಣಾ ಮಂಗಳ, ಸಂದೀಪ್ ಗರೋಡಿ, ರಮೇಶ್ ಹೆಗ್ಡೆ, ಸುರೇಖಾ ರಾವ್, ರಾಜೇಂದ್ರ, ಶಿವಪ್ರಸಾದ್, ಗೀತಾ, ರಘುವೀರ್ ಬಾಬುಗುಡ್ಡೆ, ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.