ಮ೦ಗಳೂರು: ಜಾಖ೯೦ಡ್ ನ ಕಾಂಗ್ರೆಸ್ ಸಂಸದ ಧೀರಸ್ ಪ್ರಸಾದ್ ಸಾಹೂ ಬಳಿ 220 ಕೋ.ರೂ. ಅಕ್ರಮ ಹಣ ಪತ್ತೆಯಾದ ಪ್ರಕರಣದ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ನಗರದ ಕ್ಲಾಕ್‌ಟವರ್ ಬಳಿ ಶನಿವಾರ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ವೇದವ್ಯಾಾಸ ಕಾಮತ್ ಅವರು ಕಾಂಗ್ರೆಸ್ ಸಂಸದ ಧೀರಜ್ ಪ್ರಸಾದ್ ಸಾಹೂ ಮನೆಯಲ್ಲಿ 156 ಚೀಲಗಳಲ್ಲಿ 220 ಕೋ.ರೂ. ನಗದು ಕಪ್ಪುಹಣ ಸಿಕ್ಕಿದೆ. ಭಾರತ್ ಜೋಡೋ ಕಾರ್ಯಕ್ರಮವೆಂದರೆ ಇದೇನಾ. ಕಳೆದ 75 ವರ್ಷಗಳಲ್ಲಿ ಕಾಂಗ್ರೆಸ್ ಸಂಸದರು ಈ ರೀತಿ ಎಷ್ಟು ಹಣ ಕೊಳ್ಳೆ ಹೊಡೆದಿದ್ದಾರೆ ಎಂಬುದನ್ನು ತಿಳಿಸಲಿ ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರು ಕಾಂಗ್ರೆಸ್ ಎ೦ದರು.
ಕಾಂಗ್ರೆಸ್ ಆಡಳಿತ ನಡೆಸಿರುವ ಎಲ್ಲ ಕಡೆ ಭ್ರಷ್ಟಾಚಾರಗಳನ್ನು ನಡೆಸಿದೆ. . ಡಿಕೆಶಿ -ಸಿದ್ದರಾಮಯ್ಯ ತಂಡಗಳ ನಡುವೆ ಭ್ರಷ್ಟಾಚಾರಕ್ಕೆ ಸ್ಪರ್ಧೆ ನಡೆಯುತ್ತಿದೆ. ಜನ ಇಂದು ಕಾಂಗ್ರೆಸ್ ಕಂಡು ಪಶ್ಚಾತ್ತಾಪ ಪಡುವಂತಾಗಿದೆ. ಪ್ರತಿಯೊಂದು ಇಲಾಖೆಗಳಿಗೂ ಭ್ರಷ್ಟ ಅಧಿಕಾರಿಗಳನ್ನು ನೇಮಿಸಿಕೊಳ್ಳುತ್ತಿದೆ. ಹೆಚ್ಚು ಲಂಚ ಕೊಡುವವರನ್ನು ನೇಮಕ ಮಾಡಲಾಗುತ್ತಿದೆ. ಅಧಿಕಾರಿಗಳು ಕೋಟಿಗಟ್ಟಲೆ ಹಣ ಕೊಟ್ಟು ವರ್ಗಾವಣೆ ಪಡೆದುಕೊಳ್ಳುವ ಸ್ಥಿತಿ ಉಂಟಾಗಿದೆ. ಎಫ್‌ಡಿಎ ಎಸ್‌ಡಿಎ ನೇಮಕಾತಿ ಪರೀಕ್ಷೆಯಲ್ಲಿ ಭ್ರಷ್ಟಾಚಾರ, ಔಷಧ ಖರೀದಿಯಲ್ಲಿ ಭ್ರಷ್ಟಾಚಾರ, ಅಧಿಕಾರಿಗಳು ಲಂಚ, ಮಂತ್ರಿಗಳು ಕಮಿಷನ್ ಕೇಳುತ್ತಿದ್ದಾರೆ. ಮದ್ಯಕ್ಕೆ ದರ ನಿಗದಿಯಾಗುವಂತೆ ಪರವಾನಿಗೆ ನೀಡಲು ಲಂಚಕ್ಕೆ ರೇಟ್ ಫಿಕ್ಸ್ ಮಾಡಲಾಗಿದೆ. 10 ಲಕ್ಷ ಇರುವಲ್ಲಿ 75 ಲಕ್ಷ ರೂ. ಪಡೆಯಲಾಗುತ್ತಿದೆ. ಬೇರೆ ಬೇರೆ ರಾಜ್ಯಗಳ ಚುನಾವಣೆಗೆ ಇಲ್ಲಿನ ಭ್ರಷ್ಟಾಾಚಾರದ ಹಣವನ್ನು ನೀಡಲಾಗುತ್ತಿದೆ. ಗುತ್ತಿಗೆದಾರರ ಬಿಲ್ ಪಾವತಿಗೆ ಲಂಚ ಕೇಳುತ್ತಿರುವ ಬಗ್ಗೆ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರತಿಭಟನೆ ನಡೆಸುತ್ತಿದ್ದಾರೆ ಎ೦ದವರು ಆರೋಪಿಸಿದರು.
ವಿಧಾನಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಅವರು ಮಾತನಾಡಿ ಸೋನಿಯಾಗಾಂಧಿ, ರಾಹುಲ್‌ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸಹಿತ ಉನ್ನತ ನಾಯಕರು ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದಾರೆ. ರಾಜ್ಯದ ಎಲ್ಲ ಸರಕಾರಿ ಕಚೇರಿಗಳಲ್ಲಿಯೂ ಲಂಚ ನೀಡದೆ ಕೆಲಸ ಆಗುತ್ತಿಲ್ಲ. ಜನ ತೊಂದರೆ ಅನುಭವಿಸುತ್ತಿದ್ದಾರೆ. ರಾಜ್ಯದ ಭ್ರಷ್ಟಾಚಾರದ ಹಣ ತೆಲಂಗಾಣ, ಝಾರ್ಖಂಡ್ ಮೊದಲಾದ ರಾಜ್ಯಗಳಿಗೆ ಹೋಗಿದೆ ಎಂದು ಹೇಳಿದರು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ಅನುದಾನವಿಲ್ಲದೆ ಸಚಿವರು ಅವರ ಕಚೇರಿಗಳಿಗೆ ಹೋಗುತ್ತಿಲ್ಲ. ಪಾಲಿಕೆಗೆ ಬರಬೇಕಾಗಿದ್ದ ಹಣ ಬಿಡುಗಡೆಯಾಗುತ್ತಿಲ್ಲ. ಕೇಂದ್ರ ಸರಕಾರದ ಅನುದಾನದಿಂದ ಮಾತ್ರ ಕೆಲಸಗಳು ನಡೆಯುತ್ತಿವೆ. ಈ ಹಿಂದೆ ನಡೆದಿರುವ ಕಾಮಗಾರಿಗಳ ಬಿಲ್ ಕೂಡ ತಡೆ ಹಿಡಿಯಲಾಗಿದೆ. ಮಂಗಳೂರಿಗೆ ಮಳೆ ಹಾನಿ ಕಾಮಗಾರಿಯ ಹಣವನ್ನು ಕೂಡ ನೀಡಿಲ್ಲ. ಈ ಬಗ್ಗೆ ಕೇಳಿದಾಗ ನಗರಾಭಿವೃದ್ಧಿ ಸಚಿವರು ಉಡಾಫೆಯಾಗಿ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಭ್ರಷ್ಟಾಚಾರದ ಆಡಳಿತ ನೀಡುತ್ತಿದೆ ಎಂದು ಹೇಳಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ರೂಪಾ ಡಿ.ಬಂಗೇರ, ಉಪಾಧ್ಯಕ್ಷೆ ಪ್ರಭಾ ಮಾಲಿನಿ, ಕಾರ್ಯದರ್ಶಿ ಪೂಜಾ ಪೈ, ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ ಮೊದಲಾದವರು ಪಾಲ್ಗೊಂಡಿದ್ದರು.