23.7 C
Karnataka
Friday, November 15, 2024

ಜಗತ್ತಿನಲ್ಲಿ ಭಾರತ ನಂ.1 ಆಗಲು ಮತ್ತೆ ಮೋದಿ ಸರಕಾರ ಬರಬೇಕು: ಬಿಜೆಪಿ ಎಸ್‌ಸಿ ಮೋರ್ಚಾ ಪ್ರತಿಪಾದನೆ

ಮಂಗಳೂರು: ಕಳೆದ 10 ವರ್ಷಗಳ ಆಡಳಿತದಲ್ಲಿ ಭಾರತದ ಆಮೂಲಾಗ್ರ ಬದಲಾವಣೆ ಮತ್ತು ಅಭಿವೃದ್ಧಿಗೆ ಶ್ರಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಮತ್ತೊಮ್ಮೆ ಬರಬೇಕಿದೆ. ಮುಂದಿನ ನೂರಾರು ವರ್ಷಗಳ ಅಭಿವೃದ್ಧಿ ಹೊಂದಿದ ಭಾರತಕ್ಕೆ ಈಗ ಹಾಕಿರುವ ಬುನಾದಿಯನ್ನು ಗಟ್ಟಿಗೊಳಿಸಲು, ವಿಶ್ವದಲ್ಲಿ ಭಾರತದ ಸ್ಥಾನಮಾನಗಳನ್ನು ನಂಬರ್ 1 ಮಟ್ಟಕ್ಕೆ ಒಯ್ಯಲು ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡುತ್ತೇವೆ ಎಂದು ಬಿಜೆಪಿ ಎಸ್‌ಸಿ ಮೋರ್ಚಾದ ರಾಜ್ಯ ವಕ್ತಾರ ಶಿವಶಂಕರ್ ಹೇಳಿದರು.
ಜಿಲ್ಲಾ ಬಿಜೆಪಿಯ ಲೋಕಸಭಾ ಚುನಾವಣಾ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕೇಂದ್ರದ ಬಿಜೆಪಿ ಸರಕಾರ ಜನ್‌ಧನ್, ಉಜ್ವಲಾ, ಸ್ವಚ್ಛ ಭಾರತ್ ನಂತಹ ಯೋಜನೆಗಳ ಮೂಲಕ ಕೋಟ್ಯಂತರ ಜನರ ಜೀವನ ಮಟ್ಟವನ್ನು ಎತ್ತರಕ್ಷೇರಿಸಿದೆ. ಸರಕಾರಿ ಯೋಜನೆಗಳ ಸೌಲಭ್ಯಗಳನ್ನು ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮೂಲಕ ತಲುಪಿಸಲಾಗುತ್ತಿದೆ ಎಂದು ಅವರು ಹೇಳಿದರು.

ರಾಜ್ಯದ ಕಾಂಗ್ರೆಸ್ ಸರಕಾರ ಕೇಂದ್ರದ ಯೋಜನೆಗಳಿಗೇ ತನ್ನ ಲೇಬಲ್ ಹಾಕಿಕೊಂಡು ತಾನು ಕೊಟ್ಟಿದ್ದು ಎಂಬಂತೆ ಬಿಂಬಿಸಿಕೊಳ್ಳುತ್ತಿದೆ. ಆಹಾರ ಭದ್ರತೆ ಯೋಜನೆಯಡಿ ಕೇಂದ್ರ ಸರಕಾರ ಪ್ರತಿ ತಿಂಗಳು 22 ಲಕ್ಷ ಟನ್ ಅಕ್ಕಿಯನ್ನು ವಿತರಿಸುತ್ತಿದೆ. ಆದರೆ ಕಾಂಗ್ರೆಸ್ ಸರಕಾರ ಇದಕ್ಕೇ ಅನ್ನಭಾಗ್ಯದ ಲೇಬಲ್ ಅಂಟಿಸಿ ಪ್ರಚಾರ ಮಾಡಿಕೊಳ್ಳುತ್ತಿದೆ. ಕೇಂದ್ರದ ಅನುದಾನಗಳನ್ನು ಬಿಟ್ಟಿ ಗ್ಯಾರಂಟಿಗಳಿಗೆ ಬಳಸಿಕೊಂಡು ಕೇಂದ್ರದ ವಿರುದ್ಧವೇ ತಾರತಮ್ಯದ ಆರೋಪ ಹೊರಿಸಿ ಕೋರ್ಟ್ ಮೆಟ್ಟಿಲೇರಿದೆ ಎಂದು ಶಿವಶಂಕರ್ ಟೀಕಿಸಿದರು.

ಭಾರತೀಯ ಜನತಾ ಪಕ್ಷವು ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಧ್ಯೇಯವಾಕ್ಯದಡಿ ಮೈಸೂರು ಮಹಾರಾಜರಿಂದ ಹಿಡಿದು ಜನಸಾಮಾನ್ಯರಾದ ಸರಳ ಸಜ್ಜನ ಕೋಟ ಶ್ರೀನಿವಾಸ ಪೂಜಾರಿ ವರೆಗೆ ಸಮಾಜದ ಎಲ್ಲ ಜನವರ್ಗಗಳಿಗೂ ತಾರತಮ್ಯವಿಲ್ಲದೆ ಅವಕಾಶಗಳನ್ನು ನೀಡುತ್ತಿದೆ.ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಇಡೀ ಜಗತ್ತು ಭಾರತವನ್ನು ನೋಡುವ ದೃಷ್ಟಿ ಬದಲಾಗಿದೆ. ಭಾರತದ ವರ್ಚಸ್ಸು ಭಾರೀ ಪ್ರಮಾಣದಲ್ಲಿ ವೃದ್ಧಿಸಿದ್ದು, ಎಲ್ಲ ದೇಶಗಳನ್ನು ಭಾರತವನ್ನು ಗೌರವಿಸುತ್ತಿವೆ. ಭಾರತದ ಮಾತು ಕೇಳುತ್ತಿವೆ ಎಂದು ಶಿವಶಂಕರ್ ನುಡಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಎಸ್‌ಸಿ ಮೋರ್ಚಾದ ದ.ಕ ಜಿಲ್ಲಾಧ್ಯಕ್ಷ ಜಗನ್ನಾಥ ಬೆಳುವಾಯಿ, ಪ್ರಧಾನ ಕಾರ್ಯದರ್ಶಿಗಳಾದ ಉಮೇಶ್ ಕೋಟ್ಯಾನ್ ವಾಮಂಜೂರು, ಚಂದ್ರಕಲಾ ಸಿ.ಕೆ, ಉಪಾಧ್ಯಕ್ಷ ಸದಾಶಿವ ನೆಲ್ಲಿಕ್ಕಾರು ಹಾಗೂ ಕಾರ್ಯದರ್ಶಿ ವಿನಯ್ ಸಾಲಿಯಾನ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles