ಮ೦ಗಳೂರು: ರಾಜ್ಯದಲ್ಲಿ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಾಡಿನ ಜನರಿಗಷ್ಟೆ ಅಲ್ಲ, ಗುತ್ತಿಗೆದಾರರಿಗೆ, ನಿಷ್ಟಾವಂತ ಸರ್ಕಾರಿ ಅಧಿಕಾರಿಗಳಿಗೂ ನೆಮ್ಮದಿ ಇಲ್ಲ. ಆತ್ಮಹತ್ಯೆಯೇ ಅವರ ಪಾಲಿನ ಗ್ಯಾರಂಟಿಯಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ರವರು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಮಿನಿ ವಿಧಾನ ಸೌಧದ ಬಳಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಹಾಗೂ ಪೋಸ್ಟರ್ ಅಭಿಯಾನದಲ್ಲಿ ಮಾತನಾಡಿದ ಅವರು ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಸಚಿವರ, ಶಾಸಕರ, ಹಾಗೂ ಅವರುಗಳ ಆಪ್ತ ಸಹಾಯಕರ ಒತ್ತಡ, ಬೆದರಿಕೆಗೆ ಸರ್ಕಾರಿ ನೌಕರರು, ಗುತ್ತಿಗೆದಾರರು, ಸಾಲು ಸಾಲಾಗಿ ಪ್ರಾಣ ಕಳೆದುಕೊಳ್ಳುವಂತಾಗಿದೆ. ಇದರಿಂದ ಪ್ರಾಣ ಕಳೆದುಕೊಂಡವರ ಕುಟುಂಬ ಬೀದಿಗೆ ಬರುತ್ತಿದ್ದಾರೆ. ಪ್ರಿಯಾಂಕ್ ಖರ್ಗೆಯ ಆಪ್ತರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಚಿನ್ ಪ್ರಕರಣವನ್ನು ಉಲ್ಲೇಖಿಸಿ ಮುಖ್ಯಮಂತ್ರಿ ಕುರ್ಚಿ ಅಲುಗಾಡುವ ಭಯದಿಂದ ಸಿದ್ದರಾಮಯ್ಯನವರು, ಹಾಗೂ ಮುಂದೆ ಮುಖ್ಯಮಂತ್ರಿ ಕುರ್ಚಿ ಕೈ ತಪ್ಪಬಹುದು ಎಂಬ ಭಯದಿಂದ ಡಿಕೆಶಿಯವರು ಪ್ರಿಯಾಂಕ ಖರ್ಗೆ ವಿರುದ್ಧ ಮಾತನಾಡುತ್ತಿಲ್ಲ ಎಂದರು.
ಪ್ರತಿಭಟನೆಯಲ್ಲಿ ರಮೇಶ್ ಕಂಡೆಟ್ಟು, ಪ್ರೇಮಾನಂದ ಶೆಟ್ಟಿ, ವಿಕಾಸ್ ಪುತ್ತೂರು, ನಂದನ್ ಮಲ್ಯ, ಮೋನಪ್ಪ ಭಂಡಾರಿ, ಪೂಜಾ ಪೈ, ಉಪಮೇಯರ್ ಭಾನುಮತಿ, ಸಂಜಯ್ ಪ್ರಭು, ಸೇರಿದಂತೆ ಮ.ನ.ಪಾ ಸದಸ್ಯರು, ಅನೇಕ ಬಿಜೆಪಿ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.