ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬೃಜೇಶ್ ಚೌಟ ಅವರು ನಾಳೆ (ಏ.4) ನಾಮಪತ್ರ ಸಲ್ಲಿಸಲಿರುವ ಹಿನ್ನೆಲೆಯಲ್ಲಿ ಮಹಿಳೆಯರು, ತಾಯಂದಿರ ಬೆಂಬಲದ ಸಂಕೇತವಾಗಿ ಚುನಾವಣಾ ಠೇವಣಿಯ ಮೊತ್ತಕ್ಕೆ ಕಿರು ದೇಣಿಗೆಗಳನ್ನು ಸಲ್ಲಿಸಲಾಯಿತು. ಪಕ್ಷದ ಚುನಾವಣಾ ಕಚೇರಿಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಅಭ್ಯರ್ಥಿ ಕ್ಯಾ. ಚೌಟರಿಗೆ ಮಹಿಳೆಯರು ಆರತಿ ಎತ್ತಿ, ತಿಲಕವಿಟ್ಟು,, ದೇಣಿಗೆ ನೀಡಿ ಗೆದ್ದು ಬರುವಂತೆ ಹರಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕ್ಯಾ. ಚೌಟ ಅವರು, ಇಂದು ಹಿಂದೂ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಪುಣ್ಯತಿಥಿ. ಶಿವಾಜಿ ಮಹಾರಾಜರ ಪ್ರೇರಣೆಯಂತೆ ಹಿಂದುತ್ವದ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡ ಕ್ಷೇತ್ರವನ್ನು ಪ್ರತಿನಿಧಿಸಲು ಮಾಜಿ ಸೈನಿಕನಿಗೆ ಅವಕಾಶ ನೀಡಿದ್ದಾರೆ. ನಾರೀಶಕ್ತಿ, ಮಾತೃಶಕ್ತಿಯನ್ನು ಗೌರವಿಸುವ ಬಿಜೆಪಿಗೆ ಇಂದು ಮಾತೆಯರು ಆಶೀರ್ವಾದ ಮಾಡುವ ಮೂಲಕ ನಾರೀ ಶಕ್ತಿಯನ್ನು ಪ್ರಶ್ನಿಸಿದವರಿಗೆ ಸೂಕ್ತ ಉತ್ತರ ನೀಡಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸುವೆ ಎಂದು ನುಡಿದರು.
ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಪಕ್ಷದ ಚುನಾವಣಾ ಪ್ರಭಾರಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಜಿಲ್ಲಾ ಸಮಿತಿ ಉಪಾಧ್ಯಕ್ಷೆ ಪೂಜಾ ಪೈ, ಪಕ್ಷದ ಕೋಶಾಧಿಕಾರಿ ಸಂಜಯ್ ಪ್ರಭು, ಚುನಾವಣಾ ಸಂಚಾಲಕ ನಿತಿನ್ ಕುಮಾರ್, ಹಿರಿಯ ನಾಯಕರಾದ ಜಗದೀಶ್ ಶೇಣವ ಉಪಸ್ಥಿತರಿದ್ದರು.