ಮಂಗಳೂರ: ಕುಡುಪು ಬಳಿ ಸಂಶಯಾಸ್ಪದ ರೀತಿಯಲ್ಲಿ ಅಪರಿಚಿತ ಯುವಕನ ಮೃತದೇಹ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದ೦ತೆ ಪೊಲೀಸರು 15 ಮಂದಿಯನ್ನು ಬ೦ಧಿಸಿದ್ದಾರೆ.
ಕುಡುಪು ನಿವಾಸಿಗಳಾದ ಸಚಿನ್ ಟಿ (26), ದೇವದಾಸ್ (50), ಮಂಜುನಾಥ್ (32), ಸಾಯಿದೀಪ್ (29), ನಿತೇಶ್ ಕುಮಾರ್ ಅಲಿಯಾಸ್ ಸಂತೋಷ್ (33), ದೀಕ್ಷಿತ್ ಕುಮಾರ್ (32), ಸಂದೀಪ್ (23), ವಿವಿಯನ್ ಆಳ್ವಾರೀಸ್ (41), ಶ್ರೀದತ್ತ (32), ರಾಹುಲ್ (23), ಪ್ರದೀಪ್ ಕುಮಾರ್ (35), ಮನೀಷ್ ಶೆಟ್ಟಿ (21), ಧನುಷ್ (31), ದೀಕ್ಷಿತ್ (27), ಕಿಶೋರ್ ಕುಮಾರ್ (37) ಅವರನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಬ೦ಧಿಸಿದ್ದಾರೆ. ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮ೦ಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಏ. 27 ರಂದು ಸಂಜೆ ಮಂಗಳೂರು ನಗರದ ಕುಡುಪು ಸಮೀಪ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯಲ್ಲಿ ತಿಳಿದುಬಂದಂತೆ, ಏ.27 ರಂದು ಮಧ್ಯಾಹ್ನ ಸುಮಾರು 3 ಗಂಟೆಗೆ ಕುಡುಪು ಬಳಿ ಮೈದಾನದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯಾವಳಿಯ ಸಮಯದಲ್ಲಿ, ಅಪರಿಚಿತ ವ್ಯಕ್ತಿಗೆ ಕೆಲವರು ಗುಂಪು ಸೇರಿ ಯದ್ವಾತದ್ವ ತುಳಿದು ಹಲ್ಲೆ ನಡೆಸಿದ್ದು, ನಿರಂತರ ಹಲ್ಲೆ ನಡೆಸಿದ ಕಾರಣ ಅಪರಿಚಿತ ವ್ಯಕ್ತಿಯು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಕೃತ್ಯದಲ್ಲಿ ಸುಮಾರು 25 ಕ್ಕೂ ಹೆಚ್ಚು ವ್ಯಕ್ತಿಗಳು ಭಾಗವಹಿಸಿರುವ ಸಂಶಯವಿದ್ದು, ಈಗಾಗಲೇ 15 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಕೃತ್ಯದಲ್ಲಿ ಭಾಗಿಯಾದ ಉಳಿದ ಆರೋಪಿಗಳನ್ನು ಶೀಘ್ರದಲ್ಲಿ ಪತ್ತೆಮಾಡಿ ಬಂಧಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎ೦ದವರು ತಿಳಿಸಿದ್ದಾರೆ.
