ಮ೦ಗಳೂರು: ಯಕ್ಷಗಾನ ಎಂಬುದು ಕೇವಲ ಒಂದು ಕಲೆಯಲ್ಲ. ಅದು ಪೂಜೆಗೆ ಸಮಾನಾದ ಸೇವೆ. ಯಕ್ಷಗಾನದ ಸೇವೆ ಮಾಡುವವರಿಗೆ ಸದಾ ದೇವತಾನುಗ್ರಹ ಪ್ರಾಪ್ತವಾಗುತ್ತದೆ ಎಂದು ಉದ್ಯಮಿ ಬಿ. ಶಿವಪ್ರಸಾದ್ ಪ್ರಭು ಅಭಿಪ್ರಾಯ ಪಟ್ಟರು.
ಭ್ರಾಮರೀ ಯಕ್ಷಮಿತ್ರರು ಟ್ರಸ್ಟ್ ಸಂಯೋಜನೆಯಲ್ಲಿ ಆಗಸ್ಟ್ 3 ರಂದು ಪುರಭವನದಲ್ಲಿ ಜರಗಲಿರುವ ಭ್ರಾಮರೀ ಯಕ್ಷವೈಭವ-2024ರ ಆಮಂತ್ರಣ ಪತ್ರಿಕೆ ಮತ್ತು ಪೋಸ್ಟರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಭ್ರಾಮರೀ ಯಕ್ಷಮಿತ್ರರು ಮಂಗಳೂರು ಟ್ರಸ್ಟ್ ಕಳೆದ ಹಲವು ವರ್ಷಗಳಿಂದ ಮಾದರಿ ಕಾರ್ಯಕ್ರಮ ನೀಡುವ ಮೂಲಕ ಮನೆಮಾತಾಗಿದೆ ಎಂದರು.
ಟ್ರಸ್ಟಿನ ಅಧ್ಯಕ್ಷ ವಿನಯಕೃಷ್ಣ ಕುರ್ನಾಡು ಅವರು ಮಾತನಾಡಿ, ಆ.3ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸಂಜೆ ೪ರಿಂದ ಮರುದಿನ ಮುಂಜಾನೆಯವರೆಗೆ ಯಕ್ಷಗಾನ ಜರಗಲಿದೆ. ಸಂಜೆ 4ರಿಂದ ಯಕ್ಷಛಾಯಾಚಿತ್ರ ಸಂಗ್ರಾಹಕ ಮನೋಹರ ಕುಂದರ್ ಅವರ ಅಪೂರ್ವ ಯಕ್ಷಛಾಯಾಚಿತ್ರ ಪ್ರದರ್ಶನ ಜರಗಲಿದೆ. ಸಂಜೆ 7ರಿಂದ ಸಭಾ ಕಾರ್ಯಕ್ರಮ ಪ್ರಶಸ್ತಿ ಪ್ರದಾನ ಹಾಗೂ ರಾತ್ರಿ 9ರಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಪಂಚವಟಿ, ಕಂಸವಿವಾಹ, ಸುಧನ್ವ ಮೋಕ್ಷ, ಮಹಿರಾವಣ ಕಾಳಗ ಎಂಬ ಪೌರಾಣಿಕ ಪ್ರಸಂಗಗಳು ಪ್ರದರ್ಶನಗೊಳ್ಳಲಿದೆ ಎಂದರು.
ಬಳಗದ ಟ್ರಸ್ಟಿಗಳಾದ ರವಿಶಂಕರ್ ಭಟ್, ಅಶ್ವಿತ್ ಮಾರ್ಲ, ಬಳಗದ ಹಿರಿಯ ಸದಸ್ಯರಾದ ಸೂರ್ಯನಾರಾಯಣ ಭಟ್, ಶ್ರೀನಿವಾಸ್ , ಪಶುಪತಿ ಆಚಾರ್, ಸುರೇಶ್ ಅವರು ಉಪಸ್ಥಿತರಿದ್ದರು.ಬಳಗದ ಸದಸ್ಯ ಸತೀಶ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.