ಮ೦ಗಳೂರು: ಮುಂಬರುವ ೧೮ನೇ ಲೋಕಸಭಾ ಚುನಾವಣೆ ಭಾರತದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಪ್ರಮುಖ ಚುನಾವಣೆಯಾಗಿದೆ. ಈ ಚುನಾವಣೆಯ ಫಲಿತಾಂಶ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವಿಕಸಿತ ಭಾರತದ ಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಪರಿಣಾಮಕಾರಿ ಹೆಜ್ಜೆಯಾಗಲಿದೆ ಎ೦ದು ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾನಿ೯ಕ್ ಹೇಳಿದ್ದಾರೆ.
ಬಿಜೆಪಿ ಜಿಲ್ಲಾ ಚುನಾವಣಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ನರೇಂದ್ರ ಮೋದಿಯವರ ಕಳೆದ ೧೦ ವರ್ಷಗಳ ಅಭಿವೃದ್ಧಿ ಪರ ಆಡಳಿತ ಜನಮಾನಸದಲ್ಲಿ ಒಂದು ಹೊಸ ವಿಶ್ವಾಸವನ್ನು ಮೂಡಿಸಿದೆ. ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್ ಎನ್ನುವ ಪರಿಕಲ್ಪವೆ ಕಳೆದ ಅನೇಕ ದಶಕಗಳ ಒಡೆದಾಳುವ ನೀತಿಗೆ ಭಿನ್ನವಾಗಿ ದೇಶದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ನಮ್ಮೆಲ್ಲರ ಸಂಘಟಿತ ಪ್ರಯತ್ನವನ್ನು ನೆನಪಿಸಿದಂತಿದೆ.ಅಂತರಾಷ್ಟ್ರೀಯ ಮನ್ನಣೆ, ಜಗತ್ತಿನ ಆರ್ಥಿಕ ಹಿನ್ನಡೆಯ ನಡುವೆ ಭಾರತದ ಆರ್ಥಿಕ ಸಾಧನೆ, ಗಡಿಭದ್ರತೆ, ಆತ್ಮನಿರ್ಬರ ಭಾರತದ ಪರಿಕಲ್ಪನೆ. ಫಲಾನುಭವಿಗಳಿಗೆ ನೇರ ವರ್ಗಾವಣೆಯ ಮೂಲಕ ಅಂತ್ಯೋದಯದ ಅನುಷ್ಟಾನ, ಹಿಂದೆಂದೂ ಕಂಡರಿಯದ ಮೂಲಭೂತ ಸೌಕರ್ಯಗಳ ನಿರ್ಮಾಣ ಹಾಗೂ ವೈಜ್ಞಾನಿಕ ಮತ್ತು ತಾಂತ್ರಿಕ ಕ್ಷೇತ್ರದಲ್ಲಿನ ಸಾಧನೆಗಳು ಪ್ರತಿಯೊಬ್ಬ ಭಾರತೀಯನಲ್ಲಿ ವಿಶ್ವಾಸ ಮತ್ತು ಆತ್ಮಗೌರವವನ್ನು ಮೂಡಿಸಿದೆ ಎ೦ದರು.
ದೇಶ ವಿರೋದಿ ಶಕ್ತಿಗಳು ರಾಜಕೀಯ ಮುಖವಾಡದೊಂದಿಗೆ ಕೇವಲ ಅಧಿಕಾರಕ್ಕಾಗಿ ಮಿತಿಮೀರಿದ ತುಷ್ಟಿಕರಣ ಮತ್ತು ದೇಶ ವಿಭಜನೆಯ ಹುನ್ನಾರದೊಂದಿಗೆ ರಾಜಕಾರಣ ನಡೆಸುತ್ತಿರುವುದು ವಿಷಾದನೀಯ ಮತ್ತು ಖಂಡನೀಯ.ವಿಧಾನಸೌಧದಲ್ಲಿ ಪಾಕಿಸ್ಥಾನ್ ಜಿಂದಾಬಾದ್ ಘೋಷಣೆ, ರಾಮೇಶ್ವರಂ ಕೆಫೆಯಲ್ಲಿನ ಬಾಂಬ್ ಸ್ಫೋಟ, ಹನುಮಾನ್ ಚಾಲೀಸ ವಿರೋದಿಸಿ ನಡೆಸಿದ ಹಲ್ಲೆ ಮುಂತಾದ ಘಟನೆಗಳು ಕಾಂಗ್ರೇಸ್ ಪಕ್ಷದ ಅತಿರೇಕದ ತುಷ್ಟಿಕರಣಕ್ಕೆ ಜ್ವಲಂತ ಸಾಕ್ಷಿ.ಕರ್ನಾಟಕ ರಾಜ್ಯದಲ್ಲಿನ ಕಾಂಗ್ರೇಸ್ ಸರಕಾರವು ತನ್ನ ಆರ್ಥಿಕ ವಿಪಲತೆಗೆ ಕೇಂದ್ರ ಸರಕಾರವನ್ನು ದೂಷಿಸುತ್ತಾ ಸಾಂವಿಧಾನಿಕ ಜವಾಬ್ದಾರಿಯಿಂದ ಮಣುಚಿಕೊಳ್ಳಲು ಪ್ರಯತ್ನಿಸುತ್ತಿರುವುದು ವಿಷಾದನೀಯ ಎ೦ದವರು ಹೇಳಿದರು.
ನಿವೃತ್ತ ಸೇನಾಧಿಕಾರಿ, ಮಂಗಳೂರಿನ ಯುವ ನಾಯಕ, ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್ ಬೃಜೇಶ್ ಚೌಟ ಅವರನ್ನು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡಿದೆ.ರಾಜ್ಯದಿಂದ ಇತ್ತೀಚಿನ ದಿನಗಳಲ್ಲಿ ಮೊದಲ ಬಾರಿಗೆ ಭಾರತೀಯ ಸೇನೆಯಲ್ಲಿ ದೇಶಕ್ಕಾಗಿ ದುಡಿದು ಬಂದ ವ್ಯಕ್ತಿಯೊಬ್ಬರಿಗೆ ಸಂಸತ್ ಸ್ಪರ್ಧೆಯ ಟಿಕೆಟ್ ಕೊಡಲಾಗಿದೆ. ಸೇನಾ ನಿವೃತ್ತಿಯ ಬಳಿಕ ಮಂಗಳೂರಿಗೆ ಆಗಮಿಸಿ ಅರೆಸ್ಸೆಸ್ ನ ವಿವಿಧ ಆಯಾಮಗಳಲ್ಲಿ ತೊಡಗಿಸಿಕೊಂಡು 2013ರಲ್ಲಿ ಯುವಮೋರ್ಚಾ ಜಿಲ್ಲೆ ಪ್ರಧಾನ ಕಾರ್ಯದರ್ಶಿಯಾಗಿ ಸಕ್ರಿಯ ರಾಜಕೀಯಕ್ಕಿಳಿದಿದ್ದರು. 2016-19ರಲ್ಲಿ ದಕ್ಷಿಣ ಕನ್ನಡ ಜಿಲೆ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ವಹಿಸಿಕೊಂಡು ಸಂಸದ ನಳಿನ್ ಕುಮಾರ್ ಜತೆಗೂಡಿ ಪಕ್ಷದ ಕೆಲಸ ಮಾಡಿದ್ದರು. 2019ರಲ್ಲಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿದ್ದ ಚೌಟ ಅವರು 2023ರ ವಿಧಾನಸಭೆ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದ ಪ್ರಭಾರಿಯಾಗಿದ್ದರು ಎ೦ದವರು ವಿವರಿಸಿದರು.
ಮುಖ೦ಡರಾದ ನಿತಿನ್ ಕುಮಾರ್, ಸುದಶ೯ನ್ ಮೂಡುಬಿದಿರೆ, ಕಿಶೋರ್ ಕುಮಾರ್ ಪುತ್ತೂರು, ಸ೦ಜಯ್ ಪ್ರಭು ಉಪಸ್ಥಿತರಿದ್ದರು.