ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಏಪ್ರಿಲ್ 18ರಿಂದ 20ರವರೆಗೆ ಯುಜಿಸಿಇಟಿ ಪರೀಕ್ಷೆಗಳು ನಡೆಯಲಿದ್ದು, ಮಂಗಳೂರು, ಮೂಡುಬಿದ್ರೆ, ಪುತ್ತೂರು, ಬೆಳ್ತಂಗಡಿ, ಉಲ್ಲಾಳ, ಮುಲ್ಕಿ ಹಾಗೂ ಬಂಟ್ವಾಳ ಸೇರಿದಂತೆ ಒಟ್ಟು ಏಳು ತಾಲೂಕುಗಳಲ್ಲಿ 23,823 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಮಂಗಳೂರು ತಾಲೂಕಿನಲ್ಲಿ ಒಟ್ಟು 23 ಪರೀಕ್ಷಾ ಕೇಂದ್ರಗಳಿದ್ದು 10,909 ವಿದ್ಯಾರ್ಥಿಗಳು, ಬಂಟ್ವಾಳ ತಾಲೂಕಿನಲ್ಲಿ 2 ಕೇಂದ್ರಗಳಲ್ಲಿ 840 ವಿದ್ಯಾರ್ಥಿಗಳು, ಬೆಳ್ತಂಗಡಿ ತಾಲೂಕಿನ 4 ಪರೀಕ್ಷಾ ಕೇಂದ್ರಗಳಲ್ಲಿ 1,537 ವಿದ್ಯಾರ್ಥಿಗಳು, ಮೂಡುಬಿದ್ರೆಯ 8 ಪರೀಕ್ಷಾ ಕೇಂದ್ರಗಳಲ್ಲಿ 5,602 ವಿದ್ಯಾರ್ಥಿಗಳು, ಮುಲ್ಕಿಯ ಒಂದು ಪರೀಕ್ಷಾ ಕೇಂದ್ರದಲ್ಲಿ 600 ವಿದ್ಯಾರ್ಥಿಗಳು, ಪುತ್ತೂರಿನ 3 ಪರೀಕ್ಷಾ ಕೇಂದ್ರಗಳಲ್ಲಿ 2511 ವಿದ್ಯಾರ್ಥಿಗಳು ಹಾಗೂ ಉಲ್ಲಾಳ ತಾಲೂಕಿನ ನಾಲ್ಕು ಪರೀಕ್ಷಾ ಕೇಂದ್ರಗಳಲ್ಲಿ 1,824 ವಿದ್ಯಾರ್ಥಿಗಳು ಸೇರಿದಂತೆ 23,823 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಎದುರಿಸಲಿದ್ದಾರೆ.
ಜಿಲ್ಲೆಯ ಒಟ್ಟು 45 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿರ್ದೇಶನದಂತೆ ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬರು ಪ್ರಿನ್ಸಿಪಾಲರನ್ನು ಪ್ರಶ್ನೆ ಪತ್ರಿಕೆ ಪಾಲಕರನ್ನಾಗಿ ಮತ್ತು ಒಬ್ಬರು ಹಿರಿಯ ಉಪನ್ಯಾಸಕರನ್ನು ವಿಶೇಷ ಜಾಗೃತದಳದ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.