ಮಂಗಳೂರು: ಸರ ಸುಲಿಗೆ ಮಾಡಿದ ಅಂತರ್ ರಾಜ್ಯ ಸುಲಿಗೆಕೋರರನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಬ೦ಧಿಸಿದ್ದಾರೆ. ಬಂಟ್ವಾಳ ಶಾಂತಿ ಅಂಗಡಿಯ ಮೊಹಮ್ಮದ್ ಅಲಿ @ ಅಶ್ರು ( 32 ) ಹಾಗೂ ಜುಬೇರ್ (32 ) ಬ೦ಧಿತ ಆರೋಪಿಗಳು.
ಆರೋಪಿಗಳು ಮಂಗಳೂರು ನಗರದ ಬಜಾಲ್ ನ ಜೆ.ಎಮ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಒಂಟಿ ಮಹಿಳೆಯಿಂದ 16 ಗ್ರಾಂ ತೂಕದ ಚಿನ್ನದ ಸರವನ್ನು ಸುಲಿಗೆ ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಠಾಣಾ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ಬ೦ಧಿಸಿ ಅವರಿಂದ ಸುಮಾರು ರೂ. 90,000/- ಬೆಲೆ ಬಾಳುವ ಚಿನ್ನದ ಸರವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಆರೋಪಿಗಳ ಪೈಕಿ ಮೊಹಮ್ಮದ್ ಅಲಿ @ ಅಶ್ರು ನ ವಿರುದ್ದ ಕೇರಳ ರಾಜ್ಯದ ಬದಿಯಡ್ಕ, ಮಂಜೇಶ್ವರ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಗರ ಠಾಣೆ, ವಿಟ್ಳ ಪೊಲೀಸ್ ಠಾಣೆ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ, ಬರ್ಕೆ ಪೊಲೀಸ್ ಠಾಣೆ ಗಳಲ್ಲಿ ಮನೆ ಕನ್ನ ಕಳವು, ಸುಲಿಗೆ ಪ್ರಕರಣ, ಜೈಲಿನಲ್ಲಿ ಹೊಡೆದಾಟ ಸೇರಿ ಈತನ ವಿರುದ್ದ 15 ಪ್ರಕರಣಗಳು ದಾಖಲಾಗಿರುತ್ತದೆ.
ಮಂಗಳೂರು ನಗರದ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ಅವರ ಮಾರ್ಗದರ್ಶನದಂತೆ ದಿಸಿಪಿಗಳಾದ ಸಿದ್ದಾರ್ಥ್ ಗೋಯಲ್ ಮತ್ತು ದಿನೇಶ್ ಕುಮಾರ್ ಕೆ ಅವರ ನಿರ್ದೇಶನದಂತೆ ಹಾಗೂ ಎಸಿಪಿ ಧನ್ಯಾ ನಾಯಕ್ ಅವರ ಸೂಚನೆಯಂತೆ ಕಂಕನಾಡಿ ನಗರ ಠಾಣೆಯ ನಿರೀಕ್ಷಕರಾದ ಟಿ.ಡಿ ನಾಗರಾಜ್ ಅವರ ನೇತೃತ್ವದಲ್ಲಿ ಪಿ.ಎಸ್.ಐ ಶಿವಕುಮಾರ್, ಪಿಎಸ್ ಐ ಅನಿತಾ ನಿಕ್ಕಂ, ಎ.ಎಸ್.ಐ ವೆಂಕಟೇಶ್, ಚಂದ್ರಶೇಖರ ಮತ್ತು ಸಿಬ್ಬಂದಿಗಳಾದ ಜಯಾನಂದ, ಕುಶಾಲ್ ಹೆಗ್ಡೆ, ದೀಪಕ್ ಕೊಟ್ಯಾನ್, ರಾಜೇಶ್ ಕೆ.ಎನ್, ರಾಘವೇಂದ್ರ, ಸಂತೋಷ್ ಮಾದರ್ ಮತ್ತು ಪ್ರವೀಣ್ ರವರು ಆರೋಪಿ ಮತ್ತು ಸೊತ್ತು ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.