ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇ 16ರಂದು ಮಂಗಳೂರಿಗೆ ಆಗಮಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಧ್ಯಾಹ್ನ 3:20 ಕ್ಕೆ ನಗರಕ್ಕೆ ಆಗಮಿಸುವ ಮುಖ್ಯಮಂತ್ರಿಗಳು ಮೊದಲು ನಗರದ ಉರ್ವಾ ಮಾರ್ಕೆಟ್‍ನಲ್ಲಿ ನಿರ್ಮಾಣಗೊಂಡಿರುವ ಒಳಾಂಗಣ ಕ್ರೀಡಾಂಗಣವನ್ನು ಉದ್ಘಾಟಿಸಲಿದ್ದಾರೆ.
ನಂತರ ಸಂಜೆ 4:15 ಕ್ಕೆ ಪಡೀಲ್‍ನಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ನೂತನ ಕಚೇರಿ “ಪ್ರಜಾಸೌಧ” ಉದ್ಘಾಟನೆ, ಐತಿಹಾಸಿಕ ದರ್ಖಾಸ್ತು ಪೋಡಿ ಅಭಿಯಾನದ ಅಂಗವಾಗಿ 8000 ಮಂದಿಗೆ ಆರ್.ಟಿ.ಸಿ ವಿತರಣೆ, ಗುರುಪುರ ನಾಡಕಚೇರಿ ಉದ್ಘಾಟನೆ, ಸಣ್ಣ ನೀರಾವರಿ ಇಲಾಖೆ ಕಛೇರಿ ಉದ್ಘಾಟನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ, ವಿವಿಧ ಸರಕಾರಿ ಸವಲತ್ತುಗಳ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸಂಜೆ 6:30ಕ್ಕೆ 5 ವರ್ಷಗಳಿಗೊಮ್ಮೆ ನಡೆಯುವ ಸೈಯದ್ ಮುಹಮ್ಮದ್ ಶರೀಫುಲ್ ಮದನಿ ದರ್ಗಾ ಉರೂಸ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ರಾತ್ರಿ 8:15ಕ್ಕೆ ಮುಖ್ಯಮಂತ್ರಿಗಳು ಬೆಂಗಳೂರಿಗೆ ನಿರ್ಗಮಿಸಲಿದ್ದಾರೆ.
ಮುಖ್ಯಮಂತ್ರಿಗಳೊಂದಿಗೆ ಕಂದಾಯ ಸಚಿವ ಕೃಷ್ಣಭೈರೇಗೌಡ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಮತ್ತಿತರರು ಭಾಗವಹಿಸಲಿದ್ದಾರೆ.
