ಮ೦ಗಳೂರು: ಯಶಸ್ಸಿನ ಹಿಂದೆ ಓಡಬೇಕೆಂಬ ಛಲವಿರುವ ಈಗಿನ ಪಿ ಯು ವಿದ್ಯಾರ್ಥಿಗಳಿಗೆ ಸರಿಯಾದ ಹಂತದಲ್ಲಿ ಸಮರ್ಥವಾದ ಆಪ್ತ- ಸಮಾಲೋಚನಾ ಮಾರ್ಗದರ್ಶನ ಬೇಕೇ-ಬೇಕು ಎಂದು ಬೆಂಗಳೂರಿನ ಪ್ರತಿಷ್ಠಿತ ನಿಮ್ಹಾನ್ಸ್ ಸಂಸ್ಥೆಯ ಮಾಜೀ ಹಿರಿಯ ಮನೋವೈದ್ಯ, ಪದ್ಮಶ್ರೀ ಡಾ. ಸಿ ಆರ್ ಚಂದ್ರಶೇಖರ್ ಅವರು ಹೇಳಿದ್ದಾರೆ.
ಗುರುವಾಯನಕೆರೆಯ ವಿದ್ವತ್ ಪಿಯು ಕಾಲೇಜು ಏರ್ಪಡಿಸಿದ್ದ“ಮಾನಸ ಮಾರ್ಗದರ್ಶನ ಹಾಗೂ ಸಂವಾದ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಅತೀ ಕಿರಿಯ ವಯಸ್ಸಿನಲ್ಲಿ
ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ, ಯಶಸ್ಸುಗಳಿಸಬೇಕೆಂಬ ಛಲವಿರುವ ಹದಿಹರೆಯದ ವಿದ್ಯಾರ್ಥಿಗಳಿಗೆ “ಆಪ್ತ- ಸಮಾಲೋಚನೆ” ಅತ್ಯಂತ ಉತ್ತೇಜನಕಾರಿ . ವಿದ್ವತ್ ಪಿಯು ಕಾಲೇಜು ದಿನನಿತ್ಯದ
ಕಾರ್ಯಸೂಚಿಯಾಗಿ ಆಪ್ತ-ಸಮಾಲೋಚನೆಯನ್ನು ಜಾರಿಗೊಳಿಸಿರುವುದು ರಾಜ್ಯದ ಪಿಯು ಶಿಕ್ಷಣ ವ್ಯವಸ್ಥೆಯಲ್ಲಿಯೇ ಪ್ರಥಮ ಎಂದರು.ವಿದ್ವತ್‌ನ ಪಿಯು ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಜ್ಞಾಪಕಶಕ್ತಿ ವೃದ್ಧಿ, ಒತ್ತಡ ನಿವಾರಣೆ, ಪರೀಕ್ಷಾ ತಯಾರಿಯ ವಿಧಾನ ಹಾಗೂ ಮನಸ್ಸಿನ ಜಾಡ್ಯ ನಿವಾರಣೆ, ಇತ್ಯಾದಿ ವಿಷಯಗಳ ಬಗ್ಗೆ ಸಂದೇಹ ಪರಿಹಾರಕ್ಕಾಗಿ ಎರಡು ತಾಸಿಗೂ ಹೆಚ್ಚಿನ ಕಾಲ ಸಂವಾದ ನಡೆಸಿ ಯುವ ವಿದ್ಯಾರ್ಥಿಗಳಲ್ಲಿ ಹೊಸ ಚೈತನ್ಯ ತುಂಬಿದರು.
ವಿದ್ವತ್ ಪಿಯು ಕಾಲೇಜಿನ ಕೌನ್ಸ ಲಿಂಗ್ ಮುಖ್ಯಸ್ಥರಾದ ಗಂಗಾಧರ ಇ ಮಂಡಗಳಲೆ, ಸಂಸ್ಥೆಯ ಸಂಸ್ಥಾಪಕಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ , ಪ್ರಗತಿ ಆಪಲ್ ಎಜುಕೇಶನ್‌ನ ಮುಖ್ಯಸ್ಥ ವಿಜಯಕುಮಾರ್ , ಟ್ರಸ್ಟಿ ಎಂ. ಕೆ ಕಾಶಿನಾಥ್ ಉಪಸ್ಥಿತರಿದ್ದರು.