ಮಂಗಳೂರು: ಮಂಗಳೂರಿನ ಸರ್ಕಾರಿ ಪದವಿಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ ಉತ್ತಮ ಫಲಿತಾಂಶವನ್ನು ದಾಖಲಿಸುವ ನಿಟ್ಟಿನಲ್ಲಿ ಶಿಕ್ಷಕರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನದ ಮೂಲಕ ಪ್ರೋತ್ಸಾಹ ಹಾಗೂ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಕೌನ್ಸಲಿಂಗ್ ಆರಂಭಿಸುವ ನಿಟ್ಟಿನಲ್ಲಿ ಮೊದಲಿಗೆ ಶಿಕ್ಷಕರಿಗೆ ವಿಶೇಷ ತರಬೇತಿ ಕಾರ್ಯಕ್ರಮವನ್ನು ಶಾಸಕ ವೇದವ್ಯಾಸ ಕಾಮತ್ ಅವರ ಮುತುವರ್ಜಿಯಲ್ಲಿ ಏರ್ಪಡಿಸಲಾಗಿದ್ದು ಇದೇ ಬರುವ 30ನೇ ತಾರೀಕಿನ ಶನಿವಾರದಂದು ಲಾಲ್ ಬಾಗ್ ನ ಮಣ್ಣಗುಡ್ಡೆ ರಸ್ತೆಯಲ್ಲಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ.
ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಪದವಿಪೂರ್ವ ಮತ್ತು ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಮಾತ್ರ ಅನ್ವಯಿಸುವ ಈ ಕಾರ್ಯಕ್ರಮದಲ್ಲಿ, ಈ ಹಿಂದಿನ ಸೆಮಿಸ್ಟರ್/ಅವಧಿಯಲ್ಲಿ ತಮ್ಮ ತಮ್ಮ ವಿಷಯಗಳಲ್ಲಿ ಶೇಕಡ 100ರಷ್ಟು ಫಲಿತಾಂಶವನ್ನು ಸಾಧಿಸಿದ ಶಿಕ್ಷಕರನ್ನು ಹಾಗೂ ಈ ಹಿಂದಿನ ಸೆಮಿಸ್ಟರ್/ಅವಧಿಯ ಯಾವುದೇ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ನಂತರದಲ್ಲಿ ಶಿಕ್ಷಕರಿಗೆ ವಿಶೇಷ ತರಬೇತಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಪೂರ್ವಭಾವಿ ಸಭೆಯಲ್ಲಿ ಶಾಸಕರು ಹೇಳಿದರು.
ಇದು ಪ್ರತಿಭಾನ್ವಿತ ವಿದ್ಯಾರ್ಥಿಗಳಲ್ಲಿ ಇನ್ನೂ ಹೆಚ್ಚಿನ ವ್ಯಕ್ತಿತ್ವ ವಿಕಸನ, ಶೈಕ್ಷಣಿಕ ಅಭಿವೃದ್ಧಿ, ಪ್ರೇರಣಾದಾಯಿಯಾಗುವುದರ ಜೊತೆಗೆ ಶಿಕ್ಷಕರಿಗೆ ತಮ್ಮ ಕರ್ತವ್ಯದೆಡೆಗೆ ಇನ್ನಷ್ಟು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಲು ಹುಮ್ಮಸ್ಸು ತರಲಿದೆ ಎಂಬುದು ಶಾಸಕ ವೇದವ್ಯಾಸ್ ಕಾಮತ್ ಅವರ ಆಶಯವಾಗಿದೆ.
ಸರಕಾರಿ ಪದವಿ ಪೂರ್ವ ಕಾಲೇಜು ನಾಲ್ಯಪದವು ಶಕ್ತಿನಗರ, ಕಾರ್ ಸ್ಟ್ರೀಟ್ ಪದವಿ ಪೂರ್ವ ಹಾಗೂ ಪದವಿ ಕಾಲೇಜು ರಥಬೀದಿ, ಮಹಿಳಾ ಪದವಿ ಪೂರ್ವ ಹಾಗೂ ಪದವಿ ಕಾಲೇಜು ಬಲ್ಮಠ, ಬೊಕ್ಕಪಟ್ಣ ಪದವಿ ಪೂರ್ವ ಕಾಲೇಜು, ಹಾಗೂ ಹಂಪನಕಟ್ಟೆಯ ಮಂಗಳೂರು ವಿಶ್ವವಿದ್ಯಾನಿಲಯ ಪದವಿ ಕಾಲೇಜುಗಳು ಈ ಪಟ್ಟಿಯಲ್ಲಿವೆ.