ಮ೦ಗಳೂರು:ದೇರಳಕಟ್ಟೆ ಸಮೀಪದ ಬಗಂಬಿಲ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಗೆ ಚೂರಿಯಿಂದ ಇರಿದು ಗಂಭೀರ ಗಾಯಗೊಳಿಸಿದ ಆರೋಪಿಗೆ ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ( ವಿಶೇಷ) ನ್ಯಾಯಾಲಯ 18 ವರ್ಷ 1 ತಿಂಗಳ ಕಠಿಣ ಶಿಕ್ಷೆ ವಿಧಿಸಿದೆ. ಮಂಗಳೂರು ಶಕ್ತಿ ನಗರದ ಸುಶಾಂತ್ @ ಶಾನ್ ಶಿಕ್ಷೆಗೊಳಗಾದ ಅಪರಾಧಿ.
ಸಂತ್ರಸ್ತೆ ವಿದ್ಯಾರ್ಥಿನಿ ಕಾರ್ಕಳದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಈ ಹಿಂದೆ ನೃತ್ಯ ತರಬೇತಿ ನೀಡುತ್ತಿದ್ದ ಸುಶಾಂತ್ ಎಂಬಾತನು ಆಕೆಗೆ ಪದೇ ಪದೇ ಕಿರುಕುಳ ನೀಡುತ್ತಿದ್ದನು. ಈ ಬಗ್ಗೆ ಆಕೆ ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರಿಂದ ಸುಶಾಂತನು ಸೆರೆವಾಸದಲ್ಲಿದ್ದ. ತದನಂತರ ತನ್ನನ್ನು ಸೆರೆವಾಸಕ್ಕೆ ಕಳುಹಿಸಿದ್ದಲ್ಲದೇ ಪ್ರೀತಿಗೆ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಸುಶಾಂತ್‌ನು 2019ರ ಜೂನ್ 28ರಂದು ಆಕೆಯನ್ನು ಕೊಲ್ಲ ಬೇಕೆಂಬ ಉದ್ದೇಶದಿಂದ ಸ್ಕೂಟರಿನಲ್ಲಿ ಹಿಂಬಾಲಿಸಿ ಬಂದಿದ್ದ. ಸ೦ಜೆ 4-30 ಗಂಟೆಗೆ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಹಿಂಭಾಗ ಶಾಂತಿಧಾಮದ ಬಳಿ, ಮುಂದೆ ಹೋಗದಂತೆ ಆಕೆಯನ್ನು ತಡೆದು ಮೈ ಮೇಲೆ ಕೈ ಹಾಕಿ ಅಸಭ್ಯವಾಗಿ ವರ್ತಿಸಿ ಚೂರಿಯಿಂದ ಎದೆಗೆ ಹಾಗೂ ದೇಹದ ನಾನಾ ಕಡೆಗೆ ತಿವಿದು ಗಂಭೀರ ಸ್ವರೂಪದ ಗಾಯಗೊಳಿಸಿ ತಾನು ಸಹ ಚೂರಿಯಿಂದ ಕುತ್ತಿಗೆಗೆ ತಿವಿದುಕೊಂಡು ಆತ್ಮ ಹತ್ಯೆಗೆ ಪ್ರಯತ್ನಿಸಿದ್ದ . ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇಬ್ಬರೂ ಚೇತರಿಕೆ ಕಂಡಿದ್ದರು. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಆರೋಪಿ ಸುಶಾಂತ್ ನನ್ನು ಬ೦ಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಪ್ರಕರಣದಲ್ಲಿ ಉಳ್ಳಾಲ ಪೊಲೀಸ್ ಠಾಣೆ ಪಿ.ಎಸ್.ಐ ಆಗಿದ್ದ ಗುರಪ್ಪ ಕಾಂತಿ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. 2ನೇ ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಿದೆ. ಪ್ರಕರಣದಲ್ಲಿ ಅಭಿಯೋಜನೆಯ ಪರವಾಗಿ ಒಟ್ಟು 21 ಸಾಕ್ಷಿದಾರರನ್ನು ವಿಚಾರಣೆ ನಡೆಸಲಾಗಿತ್ತು. ಸುಶಾಂತ್ ಮೇಲೆ ಹೊರಿಸಲಾದ ಎಲ್ಲ ಶಿಕ್ಷಾರ್ಹ ಕಲಂಗೆ ಅಪರಾಧಿ ಎಂದು 2ನೇ ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಪ್ರೀತಿ ಕೆ.ಪಿ. ಅವರು ತೀರ್ಪು ಪ್ರಕಟಿಸಿದ್ದಾರೆ. ದಂಡ ರೂಪದಲ್ಲಿ ವಸೂಲಾಗುವ ಹಣದ ಪೈಕೆ 2 ಲಕ್ಷ ರೂ. ಮೊತ್ತವನ್ನು ಸಂತ್ರಸ್ತೆಗೆ ನೀಡುವಂತೆ ಆದೇಶಿಸಲಾಗಿದೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿ೦ದ ಸಂತ್ರಸ್ತೆಗೆ ಈ ಪ್ರಕರಣಕ್ಕೆ ಸ೦ಬ೦ಧಿಸಿದ೦ತೆ ಸೂಕ್ತ ಪರಿಹಾರವನ್ನು ವಿತರಿಸಲು ಶಿಫಾರಸ್ಸು ಮಾಡಲಾಗಿದೆ.ಸಂತ್ರಸ್ತೆ ಪರ ಸರಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ ನಾಯಕ ಅವರು ವಾದ ಮಂಡಿಸಿರುತ್ತಾರೆ