ಮಂಗಳೂರು : ಮಹಾನಗರ ಪಾಲಿಕೆ ಆಡಳಿತವು ಹೆಚ್ಚಳಗೊಂಡಿರುವ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಕೂಡಲೇ ಇಳಿಸಬೇಕು ಇಲ್ಲದಿದ್ದಲ್ಲಿ ತೀವ್ರ ಹೋರಾಟವನ್ನು ಎದುರಿಸಬೇಕಾದೀತು ಎಂದು ಸಿಪಿಐಎಂ ಮಂಗಳೂರು ನಗರ ಉತ್ತರ ಮತ್ತು ದಕ್ಷಿಣ ಸಮಿತಿಗಳು ಜಂಟಿಯಾಗಿ ಮನಪಾ ಆಡಳಿತಕ್ಕೆ ಎಚ್ಚರಿಕೆ ನೀಡಿದೆ.
ಮಹಾನಗರ ಪಾಲಿಕೆ ಆಡಳಿತವು ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಅವೈಜ್ಞಾನಿಕ ರೀತಿಯಲ್ಲಿ ಸಂಗ್ರಹಿಸುವ ಮೂಲಕ ಜನಸಾಮಾನ್ಯರನ್ನು ಹಗಲು ದರೋಡೆ ನಡೆಸುತ್ತಿದೆ. ಮೂರು ವರುಷಗಳಿಗೊಮ್ಮೆ ತೆರಿಗೆಯನ್ನು ಪರಿಷ್ಕೃತಗೊಳಿಸಲಿರುವ ಅವಕಾಶಗಳನ್ನು ಕೈಬಿಟ್ಟು ಪ್ರತೀ ವರುಷ ಶೇಕಡಾ 3ರಷ್ಟು ಏರಿಸಲು ಮಾತ್ರ ಬಳಸಿಕೊಳ್ಳುತ್ತಿರುವುದು ತೀರಾ ಖಂಡನೀಯ. ಬೇಕಾಬಿಟ್ಟಿ ಜನರಿಂದ ಸಂಗ್ರಹಿಸುವ ತೆರಿಗೆಯ ಹಣವು ನಗರದ ಅಭಿವೃದ್ಧಿಗೆ ಬಳಕೆಯಾಗದೆ ಕೇವಲ ಭ್ರಷ್ಟಾಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂಬ ಸಂಶಯ ಜನರಲ್ಲಿ ಮನೆಮಾಡಿದೆ. ಮಹಾನಗರ ಪಾಲಿಕೆ ಬಿಜೆಪಿ ಆಡಳಿತ ಈ ಕೂಡಲೇ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಪರಿಷ್ಕೃತಗೊಳಿಸಿ ಇಳಿಸಲು ಕ್ರಮಕೈಗೊಳ್ಳಬೇಕು. ಕಸ ವಿಲೇವಾರಿ ಸೆಸ್ ಸಹಿತ ಇತರೆ ತೆರಿಗೆಗಳನ್ನು ರದ್ದುಗೊಳಿಸಬೇಕು.ಹಾಗೂ ಅವೈಜ್ಞಾನಿಕ ರೀತಿಯಲ್ಲಿ ವಿಧಿಸುತ್ತಿರುವ ತೆರಿಗೆಯನ್ನು ಸರಿಪಡಿಸಬೇಕೆಂದು ಸಿಪಿಐಎಂ ಮಂಗಳೂರು ನಗರ ದಕ್ಷಿಣ ಮತ್ತು ಉತ್ತರ ಸಮಿತಿಗಳ ಕಾರ್ಯದರ್ಶಿಗಳಾದ ಸಂತೋಷ್ ಬಜಾಲ್ ಹಾಗೂ ಪ್ರಮೀಳಾ ಶಕ್ತಿನಗರ ಅವರು ಜಂಟಿಯಾಗಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಂಗಳೂರಿನ ಅಭಿವೃದ್ಧಿಗೆ ಎಡಿಬಿಯಿಂದ ಪಡೆದ 360 ಕೋಟಿ ಮೊದಲ ಹಂತದ ಸಾಲದಲ್ಲಿ ಕುಡ್ಸೆಂಪ್ ಯೋಜನೆಯಡಿ ನಡೆಸಿದ ಒಳಚರಂಡಿ ನಿರ್ಮಾಣ ಸಂಪೂರ್ಣ ವೈಫಲ್ಯ ಕಂಡು ಈವರೆಗೂ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಅವುಗಳನ್ನು ಸರಿಪಡಿಸಲು ಮತ್ತು ನೀರು ಸರಬರಾಜಿನ ಜಲಸಿರಿ ಯೋಜನೆಗಳಿಗೆ ಸೇರಿ ಮತ್ತೆ ಎರಡನೇ ಹಂತದಲ್ಲಿ ಎಡಿಬಿಯಿಂದ ಪಡೆದ 780 ಕೋಟಿಯಲ್ಲೂ ಸರಿಯಾದ ಕಣ್ಣೋಟಗಳಿಲ್ಲದೆ ಅವೈಜ್ಞಾನಿಕ ರೀತಿಯ ಕಾಮಗಾರಿ ಸಹಿತ ಬೇಕಾಬಿಟ್ಟಿ ಹಣವನ್ನು ಪೋಲು ಮಾಡಲಾಗುತ್ತಿದೆ. ಎಡಿಬಿಯಿಂದ ಪಡೆದ ಇಷ್ಟೆಲ್ಲಾ ಸಾಲದ ಹಣವನ್ನು ತೀರಿಸಲು ಸ್ವಯಂ ಘೋಷಿತ ಆಸ್ತಿ ತೆರಿಗೆಯ ರೂಪದಲ್ಲಿ ನಗರದ ಜನಸಾಮಾನ್ಯರ ಮೇಲೆ ಸಾಲದ ಹೊರೆ ಹೊರಿಸಿ ವಿಪರೀತ ಪ್ರಮಾಣದ ತೆರಿಗೆ ಸಂಗ್ರಹಿಸಲಾಗುತ್ತಿರುವುದು ಜನವಿರೋಧಿ ನಡೆಯಾಗಿದೆ. ಮಂಗಳೂರು ನಗರ ಪಾಲಿಕೆ ಹೊರತು ಪಡಿಸಿ ಕರ್ನಾಟಕ ರಾಜ್ಯದ ಬೇರೆಲ್ಲೂ ಇಷ್ಟೊಂದು ಪ್ರಮಾಣದ ಅದರಲ್ಲೂ ಎರಡೆರಡು ಬಗೆಯ ತೆರಿಗೆಗಳನ್ನು ಸಂಗ್ರಹಿಸಲಾಗುತ್ತಿಲ್ಲ. ಇಲ್ಲಿ ಮಾತ್ರವೇ ಆಸ್ತಿ ತೆರಿಗೆ ಸೇರಿ ಕಸ ವಿಲೇವಾರಿಯಲ್ಲೂ ಸೆಸ್ ರೂಪದ ತೆರಿಗೆಗಳನ್ನು ಸಂಗ್ರಹಿಸಲಾಗುವುದು ನಾಚಿಕೆಗೇಡಿನ ಸಂಗತಿ ಎಂದು ಸಿಪಿಐಎಂ ಆಕ್ರೋಶ ವ್ಯಕ್ತಪಡಿಸಿದೆ