ಬಂಟ್ವಾಳ : ಖೋಟಾ ನೋಟುಗಳ ವಿನಿಮಯ ಜಾಲವೊ೦ದನ್ನು ಪತ್ತೆಹಚ್ಚಿರುವ ಬಂಟ್ವಾಳ ನಗರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬ೦ಧಿಸಿದ್ದಾರೆ.
ಮೇ 10 ರಂದು ರಾತ್ರಿ ಬಿ,ಸಿ.ರೋಡಿನ ಆಸ್ಪತ್ರೆಯ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಕೇರಳ ನೋ೦ದಣಿಯ ಕಾರನ್ನು ಪರಿಶೀಲಿಸಲು ಬಂಟ್ವಾಳ ನಗರ ಠಾಣೆಯ ಪಿ.ಎಸ್.ಐ ರಾಮಕೃಷ್ಣ ಅವರು ಸಿಬ್ಬಂದಿಗಳೊಂದಿಗೆ ತೆರಳಿದಾಗ, ಸದ್ರಿ ಕಾರಿನ ಚಾಲಕ ಸೀಟಿನಲ್ಲಿದ್ದಾತ ಹಾಗೂ ಇನ್ನೋರ್ವ ವ್ಯಕ್ತಿ ಪರಾರಿಯಾಗಲು ಯತ್ನಿಸಿದ್ದರು.ಪರಾರಿಯಾಗುತ್ತಿದ್ದವರ ಪೈಕಿ, ಓರ್ವನನ್ನು ಸೆರೆಹಿಡಿದಿದ್ದು, ಮತ್ತೋರ್ವ ಪರಾರಿಯಾಗಿರುತ್ತಾನೆ. ಸೆರೆಸಿಕ್ಕವರನ್ನು ವಿಚಾರಿಸಲಾಗಿ ಕಾಸರಗೋಡು ತಾಲೂಕು ಕೂಡ್ಲು ಗ್ರಾಮದ ಮೊಹಮ್ಮದ್ ಸಿ.ಎ. (61) ಹಾಗೂ ಕಮರುನ್ನೀಸಾ (41), ಎಂಬುದಾಗಿ ತಿಳಿಸಿದ್ದು, ಓಡಿ ಪರಾರಿಯಾದ ವ್ಯಕ್ತಿ ಶೆರೀಫ್ ಎಂಬುದಾಗಿ ತಿಳಿದುಬಂದಿರುತ್ತದೆ. ವಿಚಾರಣೆಯ ವೇಳೆ ಆರೋಪಿಗಳು ಖೋಟಾ ನೋಟುಗಳನ್ನು ವಿನಿಮಯ ಮಾಡಲು ಬಂದಿರುವುದಾಗಿ ತಿಳಿಸಿ, ತಮ್ಮ ಸ್ವಾಧೀನದಲ್ಲಿದ್ದ 500 ರೂಪಾಯಿ ಮುಖ ಬೆಲೆಯ 46 ಖೋಟಾ ನೋಟುಗಳನ್ನು ಹಾಜರುಪಡಿಸಿರುತ್ತಾರೆ. ಸದ್ರಿ ನೋಟುಗಳನ್ನು ವಶಕ್ಕೆ ಪಡೆದಿದ್ದು, ಬಳಿಕ ಆರೋಪಿಗಳನ್ನು ಹಾಗೂ ಅವರ ಬಳಿಯಿದ್ದ ರೂ 5,300 ನಗದು ಹಣ ಮತ್ತು 3 ಮೊಬೈಲ್ ಗಳನ್ನು ಸ್ವಾಧೀನಪಡಿಸಿ, ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.