ಮಂಗಳೂರು: 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದೆ. ಪ್ರಸಕ್ತ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಈ ಯೋಜನೆಯನ್ನು ಅನುಷ್ಠಾನ ಮಾಡಲು ಅಗ್ರಿಕಲ್ಚರ್ ಇನ್ಸೂರೆನ್ಸ್ ಕಂಪೆನಿಯನ್ನು ನಿಗದಿಪಡಿಸಲಾಗಿದೆ.
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಕೃಷಿ ಬೆಳೆಗೆ ಸಂಬಂಧಿಸಿದಂತೆ, ಭತ್ತವು ನೊಂದಾಯಿತ ಬೆಳೆಯಾಗಿದ್ದು ಭತ್ತ ಬೆಳೆಯುವ ರೈತರು ಈ ಯೋಜನೆಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು, ಈ ಯೋಜನೆಯಡಿ ಮುಂಗಾರು ಹಂಗಾಮಿನಲ್ಲಿ ಅಧಿಸೂಚಿತ ಘಟಕದಲ್ಲಿ ಯಾವುದೇ ಪ್ರಕೃತಿ ವಿಕೋಪಗಳಿಂದ/ ಹವಾಮಾನ ವೈಪರೀತ್ಯದಿಂದಾಗಿ ಶೇ.75ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ವಿಮಾಮೊತ್ತದ ಗರಿಷ್ಠ ಶೇ.25ರ ಭಾಗವನ್ನು, ಬಿತ್ತನೆಯಿಂದ ಕಟಾವು ಹಂತದವರೆಗಿನ ಮಧ್ಯದ ಅವಧಿಯಲ್ಲಿ ಶೇ.50ಕ್ಕಿಂತ ಹೆಚ್ಚು ಬೆಳೆ ನಷ್ಟ ಸಂಭವಿಸಿದರೆ ಮುಂಚಿತವಾಗಿ ಅಂದಾಜು ಮಾಡಲಾದ ಬೆಳೆವಿಮಾ ನಷ್ಟ ಪರಿಹಾರದಲ್ಲಿ ಶೇ.25ರಷ್ಟು ಹಣವನ್ನು ಪರಿಹಾರವಾಗಿ ನೀಡಲಾಗುತ್ತದೆ.
ಕಟಾವಿನ ನಂತರದ ಸಮಯದಲ್ಲಿ ಬೆಳೆಯನ್ನು ಒಣಗಿಸಲು ಬಿಟ್ಟಂತ ಸಂದರ್ಭದಲ್ಲಿ 2 ವಾರದೊಳಗೆ ಅಕಾಲಿಕ ಮಳೆ/ಚಂಡಮಾರುತ ಸಹಿತ ಮಳೆಯಿಂದಾಗಿ ಕಟಾವು ಮಾಡಲಾದ ಬೆಳೆಯು ನಾಶವಾದರೆ ವಿಮಾ ಸಂಸ್ಥೆಯು ವೈಯಕ್ತಿಕವಾಗಿ ಬೆಳೆ ನಷ್ಟ ನಿರ್ಧಾರ ಮಾಡಿ ಬೆಳೆ ನಷ್ಟ ಪರಿಹಾರವನ್ನು ಇತ್ಯರ್ಥ ಪಡಿಸುತ್ತದೆ.
ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳಾದ ಭೂಕುಸಿತ, ಬೆಳೆ ಮುಳುಗಡೆ, ಆಲಿಕಲ್ಲು ಮಳೆಯಿಂದುಂಟಾಗುವ ನಷ್ಟವನ್ನು ವೈಯಕ್ತಿಕ ಕ್ಷೇತ್ರವಾರು ನಿರ್ಧರಿಸಿ ರೈತರಿಗೆ ಬೆಳೆವಿಮಾ ನಷ್ಟ ಪರಿಹಾರವನ್ನು ನೀಡಲಾಗುವುದು. ರೈತರು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಭತ್ತದ ಬೆಳೆಗೆ ನೊಂದಾಯಿಸಲು ಆಗಸ್ಟ್ 16 ಕೊನೆಯ ದಿನಾಂಕವಾಗಿದೆ.
ವಿಮಾ ಕಂತು ಒಂದು ಎಕರೆಗೆ ರೂ. 516/- ಇರುತ್ತದೆ ಹಾಗೂ ಒಟ್ಟು ವಿಮಾ ಮೊತ್ತ ಎಕರೆಗೆ ರೂ.25,800/-ವಾಗಿರುತ್ತದೆ. ಅರ್ಹ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಹತ್ತಿರದ ಬ್ಯಾಂಕುಗಳಲ್ಲಿ ನಿಗದಿತ ದಿನಾಂಕದೊಳಗೆ ವಿಮಾಕಂತಿನ ಮೊತ್ತವನ್ನು ಪಾವತಿಸಬೇಕಾಗಿ ಮತ್ತು ವಿಮೆ ಮಾಡಿಸಿದ ರೈತರು ಬೆಳೆ ನಷ್ಟದ ಬಗ್ಗೆ ಸಂಬಂಧಿಸಿದ ಹಣಕಾಸು ಸಂಸ್ಥೆ ಅಥವಾ ವಿಮಾಸಂಸ್ಥೆ ಕಛೇರಿಗಳಿಗೆ ನಷ್ಟ ಸಂಭವಿಸಿದ 72 ಗಂಟೆಯೊಳಗೆ ವಿಮೆ ಮಾಡಿಸಲಾದ ಬೆಳೆ ವಿವರ, ಹಾನಿಯ ವ್ಯಾಪ್ತಿ ಹಾಗೂ ಹಾನಿಯ ಕಾರಣವನ್ನು ತಿಳಿಸಬೇಕಾಗುತ್ತದೆ.
ಬೆಳೆ ಸಾಲ ಪಡೆದ/ಪಡೆಯದ ರೈತರಿಗೆ ಬೆಳೆ ವಿಮೆ ಐಚ್ಛಿಕ. ರೈತರು ನೋಂದಣಿಗಾಗಿ ಕಡ್ಡಾಯವಾಗಿ ಫ್ರೂಟ್ಸ್ ಐ.ಡಿ. (ಈIಆ) ಹೊಂದಿರಬೇಕು. ಬೆಳೆ ಸಾಲ ಪಡೆದ ರೈತರು ಬೆಳೆ ವಿಮೆಯಲ್ಲಿ ಭಾಗವಹಿಸಲು ಇಚ್ಚಿಸದಿದ್ದಲ್ಲಿ ಬ್ಯಾಂಕಿನ ವ್ಯವಸ್ಥಾಪಕರಿಗೆ ಕೊನೆಯ ದಿನಾಂಕದ ಒಂದು ವಾರದ ಮೊದಲು ಈ ಕುರಿತು ಮುಚ್ಚಳಿಕೆ ಪತ್ರ ನೀಡಿ ಬೆಳೆ ವಿಮೆಯಿಂದ ಕೈಬಿಡಲು ಕೋರಬಹುದು, ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸುವಂತೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.