21.1 C
Karnataka
Friday, November 15, 2024

ದ.ಕ. ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಒತ್ತು: ಮಂಜುನಾಥ ಭಂಡಾರಿ

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ನಿಂತ ನೀರಾಗಿದ್ದು ಜಿಲ್ಲೆಗೆ ಹೊರಗಿನಿಂದ ಬರುವ ಪ್ರವಾಸಿಗರ ಸಂಖ್ಯೆ ತೀರಾ ಇಳಿಮುಖವಾಗಿದೆ. ಹೀಗಾಗಿ ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಮತ್ತು ಪಿಲಿಕುಳದಲ್ಲಿ ಉತ್ಸವವನ್ನು ಆಯೋಜಿಸುವ ಮೂಲಕ ಪಿಲಿಕುಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನ ಪರಿಷತ್ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಡಾ.ಮಂಜುನಾಥ ಭಂಡಾರಿ ಹೇಳಿದ್ದಾರೆ.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪ್ರೆಸ್‌ ಕ್ಲಬ್‌ನಲ್ಲಿ ಬುಧವಾರ ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ದ.ಕ. ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಸಾಮಾಜಿಕ ಚಟುವಟಿಕೆಗಳು ಸೀಮಿತಗೊಂಡಿದ್ದು, ದೇಶದ ಮಹಾನಗರಗಳಲ್ಲಿ ಇರುವಂತಹ ನೈಟ್ ಲೈಫ್ ಪರಿಕಲ್ಪನೆಯೇ ಇಲ್ಲವಾಗಿದೆ. ಹೀಗಾಗಿ ಇಲ್ಲಿ ಐಟಿ ಬಿಟಿ ಕಂಪನಿಗಳು ಹೂಡಿಕೆಗೆ ಹಿಂದೇಟು ಹಾಕುತ್ತಿವೆ. ಇಲ್ಲಿ ವಿದ್ಯಾರ್ಥಿಗಳು ಪರಸ್ಪರ ಮಾತನಾಡುವುದು, ತಿನ್ನುವ ಆಹಾರ, ಧರಿಸುವ ಬಟ್ಟೆಯ ಮೇಲಿನ ನಿರ್ಬಂಧಗಳು ಹೊರ ರಾಜ್ಯ, ದೇಶಗಳ ವಿದ್ಯಾರ್ಥಿಗಳು ಹಾಗೂ ಪೋಷಕರು ಕೂಡಾ ಇಲ್ಲಿ ಬರಲು ಹಿಂದೇಟು ಹಾಕುತ್ತಿದ್ದಾರೆ. ಶಿಕ್ಷಣ ಹಬ್ ಆಗಿರುವ ಜಿಲ್ಲೆಯಲ್ಲಿ ಹಿಂದೆಲ್ಲಾ ಹೊರ ರಾಜ್ಯಗಳ ಸಾಕಷ್ಟು ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಮಂಗಳೂರನ್ನು ಅವಲಂಬಿಸಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಪಿಯುಸಿ ಮೇಲಿನ ಹಂತದ ಶಿಕ್ಷಣಕ್ಕೆ ಹೊರ ರಾಜ್ಯಗಳ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದವರು ಹೇಳಿದರು.ಜಿಲ್ಲೆಯ ಬೀಚ್ ಸೇರಿದಂತೆ ಪ್ರವಾಸೋದ್ಯಮಕ್ಕೆ ಪೂರಕವಾಗಿ ಕ್ರಮಗಳನ್ನು ಕೈಗೊಳ್ಳಲು ಕೂಡಾ ಆದ್ಯತೆ ನೀಡುವುದಾಗಿ ಅವರು ಈ ಸಂದರ್ಭ ತಿಳಿಸಿದರು.

ಪಿಲಿಕುಳದಲ್ಲಿ ಉತ್ಸವ ಆಯೋಜನೆ!

ಪಿಲಿಕುಳದಲ್ಲಿ ಹಿಂದೆ ನಡೆಯುತ್ತಿದ್ದ ಕಂಬಳ ಬಂದ್ ಆಗಿದೆ. ಹೀಗಾಗಿ ಪಿಲಿಕುಳದಲ್ಲಿ ಪಿಲಿಕುಳೋತ್ಸವ ಅಥವಾ ತುಳುನಾಡೋತ್ಸವ ರೀತಿ ಒಂದು ವಾರಗಳ ಕಾಲ ನಮ್ಮ ನಾಡು, ನುಡಿ, ಸಂಸ್ಕೃತಿಯನ್ನು ಪ್ರಚಾರ ಮಾಡಲು ಕಾರ್ಯಕ್ರಮ ಆಯೋಜಿಸಲು ಮುಂದಾಗಿದ್ದೇವೆ. ಈಗಾಗಲೇ ಸ್ಪೀಕರ್ ಯು.ಟಿ. ಖಾದರ್ ನೇತೃತ್ವದಲ್ಲಿ ಒಂದು ಸಭೆ ನಡೆದಿದ್ದು ಮುಂದೆ ಉತ್ಸವವನ್ನು ಯಾವ ರೀತಿ ನಡೆಸಬಹುದು ಎಂಬ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸಲಿದ್ದೇವೆ ಎಂದರು.

ಶಾಲೆ ದತ್ತು ಪಡೆದು ಮಾದರಿ ಶಾಲೆಯಾಗಿ ಪರಿವರ್ತನೆ!

“ಕೋಡಿ ಬೆಂಗ್ರೆ ಶಾಲೆ ಕುಸಿದು ಬೀಳುವ ಸ್ಥಿತಿಯಲ್ಲಿತ್ತು. ಅಲ್ಲಿ ಭೇಟಿ ಕೊಟ್ಟು ಶಾಲೆಯನ್ನು ದತ್ತು ಪಡೆದು ನನ್ನ ಸ್ವಂತ ಹಣ ಮಾತ್ರವಲ್ಲದೆ ದಾನಿಗಳ ನೆರವಿನಿಂದ ಸಂಪೂರ್ಣ ಅಭಿವೃದ್ಧಿ ಮಾಡಿ ರಾಜ್ಯ ಮಾತ್ರವಲ್ಲದೆ ರಾಷ್ಟ್ರದಲ್ಲಿ ಮಾದರಿ ಶಾಲೆಯನ್ನಾಗಿ ಪತಿವರ್ತಿಸಲಾಗುವುದು. ಇದೇ ರೀತಿ ಬೆಂಜನಪದವು ಶಾಲೆಯನ್ನೂ ಅಭಿವೃದ್ಧಿ ಪಡಿಸಲಾಗುವುದು“ ಎಂದರು. ”ಅಡಿಕೆ ಹಾಳೆ ಅಡಿಕೆ ತಟ್ಟೆಗಳು ನಮ್ಮ ಜಿಲ್ಲೆಯಿಂದಲೇ ರಫ್ತು ಆಗುತ್ತಿದೆ. ಇದನ್ನು ರಾಜ್ಯದೆಲ್ಲೆಡೆ ಪ್ರಚಾರ ಮಾಡುವ ಕೆಲಸ ಆಗಬೇಕು. ಪತ್ರಕರ್ತರ ಸಂಘದ ವತಿಯಿಂದ ರಾಜ್ಯಮಟ್ಟದ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಆಯೋಜನೆ ಮಾಡಬೇಕು“ ಎಂದು ಶಾಸಕರು ಒತ್ತಾಯಿಸಿದರು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೆಸ್‌ಕ್ಲಬ್ ಅಧ್ಯಕ್ಷ ಹರೀಶ್ ರೈ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ರಾಜ್ಯ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು.ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ನಿರೂಪಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles