ಮಂಗಳೂರು : ಸರಕಾರಿ ಯೋಜನೆಗಳ ಫಲಾನುಭವಿಗಳಿಗೆ ಅಥವಾ ಪ್ರಾಕೃತಿಕ ದುರಂತಗಳ ಸಂತ್ರಸ್ತರಿಗೆ ಸೌಲಭ್ಯವನ್ನು ಮಂಜೂರು ಮಾಡಲು ದಾಖಲೆಗಳ ಕೊರತೆ ನೆಪದಲ್ಲಿ ವಿಳಂಬಿಸುವುದನ್ನು ಸಹಿಸಲಾಗದು ಎಂದು ಸ್ಪೀಕರ್ ಯು.ಟಿ ಖಾದರ್ ತಿಳಿಸಿದ್ದಾರೆ.
ಅವರು ಬುಧವಾರ ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀನಿವಾಸ ಮಲ್ಯ ಸಭಾಂಗಣದಲ್ಲಿ ಉಳ್ಳಾಲ ತಾಲೂಕು ಮಟ್ಟದ ಕುಡಿಯುವ ನೀರಿನ ಯೋಜನೆ, ಅತಿವೃಷ್ಟಿ ಅನಾವೃಷ್ಟಿ ಕುರಿತು ಉಳ್ಳಾಲ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
ಮಳೆಹಾನಿ, ಮನೆಕುಸಿತ, ಕಾಡುಪ್ರಾಣಿಗಳ ದಾಳಿ ಸೇರಿದಂತೆ ವಿವಿಧ ಪ್ರಾಕೃತಿಕ ಘಟನೆಗಳು ಸಂಭವಿಸಿದಾಗ ಸಂತ್ರಸ್ತರಿಗೆ ಪರಿಹಾರ ನೀಡಲು ದಾಖಲೆಗಳ ಕೊರತೆಯ ನೆಪದಲ್ಲಿ ಪರಿಹಾರ ವಿಳಂಬಿಸುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿದೆ. ಘಟನೆಗಳು ನಡೆದಿರುವುದು ವಾಸ್ತವ ಆಗಿದ್ದರೂ ಸಾರ್ವಜನಿಕರಿಗೆ ಪರಿಹಾರ ನೀಡಲು ವಿಳಂಬವಾಗುತ್ತಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಘಟನೆಗಳ ಬಗ್ಗೆ ಆಯಾಯ ಸ್ಥಳಗಳಿಗೆ ಭೇಟಿ ನೀಡಿ ದೃಢೀಕರಿಸಿ ಪರಿಹಾರವನ್ನು ತ್ವರಿತವಾಗಿ ವಿತರಿಸಬೇಕು ಅವರು ಕಟ್ಟುನಿಟ್ಟಾಗಿ ಸೂಚಿಸಿದರು
ಪ್ರಾಕೃತಿಕ ವಿಕೋಪ ನಿರ್ವಹಣೆಯಲ್ಲಿ ಗ್ರಾಮ ಪಂಚಾಯತ್‍ಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಕಂದಾಯ ಇಲಾಖೆಯೊಂದಿಗೆ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು. ಸಂಶಯದ ಮೇಲೆ ಜನರಿಗೆ ಪರಿಹಾರ ನಿರಾಕರಿಸುತ್ತಿರುವುದು ಸರಿಯಲ್ಲ ಎಂದು ಸ್ಪೀಕರ್ ಹೇಳಿದರು.
ಗ್ರಾಮೀಣ ಪ್ರದೇಶಗಳಲ್ಲಿ ಹೊಸ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲು ಗ್ರಾಮ ಪಂಚಾಯತ್ ಡೋರ್ ನಂಬರ್ ದಾಖಲೆಗಳನ್ನು ಸಲ್ಲಿಸಿದ ನಂತರವೂ ವಾಸ ಯೋಗ್ಯ ಪ್ರಮಾಣ ಪತ್ರ ನೀಡಲು ಕೇಳುತ್ತಿರುವ ಬಗ್ಗೆ ಸಾರ್ವಜನಿಕರು ಆಕ್ಷೇಪಿಸುತ್ತಿದ್ದಾರೆ. ಇದರಿಂದ ವಿದ್ಯುತ್ ಸಂಪರ್ಕ ನೀಡಲು ವಿಳಂಬವಾಗುತ್ತಿದೆ. ಈ ನಿಟ್ಟಿನಲ್ಲಿ ಮನೆ ನಿರ್ಮಿಸಿದ ನಂತರ ಗ್ರಾಮ ಪಂಚಾಯತ್ ಸಿಸಿ ಪಡೆದು ವಿದ್ಯುತ್ ಸಂಪರ್ಕ ನೀಡುವಂತೆ ಅವರು ಸೂಚಿಸಿದರು.
ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸ್ಥಳೀಯ ಮಟ್ಟದ ಅಧಿಕಾರಿಗಳು ಸಮನ್ವಯದಿಂದ ತಂಡ ಮಾದರಿಯಲ್ಲಿ ಕಾರ್ಯನಿರ್ವಹಿಸಬೇಕು. ಸಮಸ್ಯೆಗಳ ಬಗ್ಗೆ ಪರಸ್ಪರ ಆರೋಪಿಸುವ ಬದಲು ಅದರ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಅವರು ಸೂಚಿಸಿದರು.
ಲೋಕೋಪಯೋಗಿ ರಸ್ತೆಗಳ ಬದಿಗಳಲ್ಲಿ ತಾತ್ಕಲಿಕವಾಗಿ ಚಪ್ಪರ, ಶೀಟ್ ಹಾಕಿ ವ್ಯಾಪಾರ ಮಾಡಲು ಯಾವುದೇ ಕಾರಣಕ್ಕೂ ಅವಕಾಶ ಕೊಡಬಾರದು. ಆದರೆ ತಳ್ಳುಗಾಡಿ ಅಥವಾ ಅಂದಂದೇ ಸರಕುಗಳನ್ನು ತಂದು ಹೋಗುವ ವ್ಯಾಪಾರಿಗಳಿಗೆ ತೊಂದರೆ ಕೊಡದಂತೆ ಅವರು ಪಿ.ಡಬ್ಲ್ಯು.ಡಿ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಉಳ್ಳಾಲ ನಗರಸಭೆ ಅಧ್ಯಕ್ಷೆ ಶಶಿಕಲಾ, ಉಳ್ಳಾಲ ತಹಶೀಲ್ದಾರ್ ಪುಟ್ಟರಾಜು, ಉಳ್ಳಾಲ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಗುರುದತ್, ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರು, ಪಿಡಿಒಗಳು ಉಪಸ್ಥಿತರಿದ್ದರು.
