ಮಂಗಳೂರು:ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಗಿಗ್ ಕಾರ್ಮಿಕರಿಗೆ ದೇಶದಲ್ಲಿಯೇ ಮೊದಲ ಬಾರಿಗೆ ವಿಮಾ ಯೋಜನೆ ಜಾರಿಯಾಗಿರುತ್ತದೆ. ಎಲ್ಲಾ ಅರ್ಹ ಗಿಗ್ ಕಾರ್ಮಿಕರು ಸೇವಾ ಸಿಂಧು ಪೋರ್ಟಲ್ ನಲ್ಲಿ ನೋಂದಾಯಿಸಬಹುದು. ವಿಮಾ ಸೌಲಭ್ಯವು ಕರ್ತವ್ಯದಲ್ಲಿರುವಾಗ, ಇಲ್ಲದಿರುವಾಗ ಸಂಭವಿಸುವ ಅಪಘಾತಗಳಿಗೂ ಅನ್ವಯವಾಗಲಿದೆ.
ಯೋಜನೆ ಸಂಪೂರ್ಣ ಉಚಿತ, ಯಾವುದೇ ರೀತಿಯ ಪ್ರೀಮಿಯಂ ಪಾವತಿಸುವ ಅಗತ್ಯತೆ ಇರುವುದಿಲ್ಲ. ಸ್ವಿಗ್ಗಿ, ಜೊಮಾಟೋ ಅಂತಹಾ ಸಂಸ್ಥೆಗಳಲ್ಲಿ ಫುಡ್ ಡೆಲಿವರಿ ಮಾಡುವ ಹಾಗೂ ಇ-ಕಾಮರ್ಸ್ ಸಂಸ್ಥೆಗಳಾದ ಅಮೆಜಾನ್, ಪ್ಲಿಫ್‍ಕಾರ್ಟ್, ಪೋರ್ಟರ್, ಫಾರ್ಮಸಿ, ಬ್ಲಿಂಕಿಟ್, ಜೆಪ್ಪೋ, ಬಿಗ್ ಬಾಸ್ಕೆಟ್, ಡಾಮಿನೋಜ್ ಮುಂತಾದ ಸಂಸ್ಥೆಗಳಲ್ಲಿ ಡೆಲಿವರಿ ವೃತ್ತಿಯಲ್ಲಿ ತೊಡಗಿಸಿಕೊಂಡ ಎಲ್ಲಾ ಅಸಂಘಟಿತ ಗಿಗ್ ಕಾರ್ಮಿಕರಿಗೆ ಈ ಯೋಜನೆ ಲಭ್ಯವಿದೆ.
ಸೌಲಭ್ಯಗಳು:
• ಅಪಘಾತದಿಂದ ಮರಣ ಹೊಂದಿದಲ್ಲಿ ವಿಮಾ ಪರಿಹಾರ ರೂ.2 ಲಕ್ಷ ಹಾಗೂ ಜೀವ ವಿಮಾ ರೂ.2 ಲಕ್ಷ ಸೇರಿ ಒಟ್ಟು ರೂ.4 ಲಕ್ಷಗಳು.
• ಅಪಘಾತದಿಂದ ಶಾಶ್ವತ ದುರ್ಬಲತೆ ಹೊಂದಿದಲ್ಲಿ ರೂ.2 ಲಕ್ಷಗಳ ವರೆಗ ಸೌಲಭ್ಯ.
• ಆಸ್ಪತ್ರೆ ವೆಚ್ಚ ಮರುಪಾವತಿ ರೂ.1 ಲಕ್ಷಗಳವರೆಗೆ (ಅಪಘಾತ ಪ್ರಕರಣಗಳಿಗೆ ಮಾತ್ರ).
• ಜೀವ ವಿಮಾ ರೂ.2 ಲಕ್ಷ.
18ರಿಂದ 60 ವರ್ಷದೊಳಗಿನ ಗಿಗ್ ಕಾರ್ಮಿಕರು ಸೇವಾ ಸಿಂಧು ಪೋರ್ಟಲ್ ಮೂಲಕ ತಮ್ಮ ಹೆಸರು ನೋಂದಾಯಿಸಬೇಕು. ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಭವಿಷ್ಯನಿಧಿ ಹಾಗೂ ಇ.ಎಸ್.ಐ ಫಲಾನುಭವಿಯಾಗಿರಬಾರದು ಹಾಗೂ ಕರ್ನಾಟಕದಲ್ಲಿ ಡೆಲಿವರಿ ಕಾರ್ಯನಿರ್ವಹಿಸುತ್ತಿರುವವರಿಗೆ ಮಾತ್ರ ಅನ್ವಯಿಸುತ್ತದೆ. ಆಧಾರ್ ಸಂಖ್ಯೆ, ವೃತ್ತಿ ನಿರ್ವಹಿಸುತ್ತಿರುವ ಸಂಸ್ಥೆಗಳು ವಿತರಿಸಿದ ಗುರುತಿನ ಚೀಟಿ, ವೇತನ ಚೀಟಿ, ವೇತನ ಪಡೆದ ಬ್ಯಾಂಕ್ ಪಾಸ್ ಬುಕ್ ಹಾಗೂ ಇ-ಶ್ರಮ್ ಕಾರ್ಡ್ ಈ ಎಲ್ಲಾ ದಾಖಲೆಗಳನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿಗೆ ಕಾರ್ಮಿಕ ಅಧಿಕಾರಿಯವರ ಕಚೇರಿ, ಕಾರ್ಮಿಕ ನಿರೀಕ್ಷಕರುಗಳ ಕಚೇರಿ ಅಥವಾ ದೂ.ಸಂಖ್ಯೆ:0824-2435343, 0824-2433132 ಸಂಪರ್ಕಿಸುವಂತೆ ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.