ಮ೦ಗಳೂರು: ಸ್ಟೇಟ್ ಬ್ಯಾಂಕ್ ನಿಂದ ಜಪ್ಪಿನಮೊಗರು ಮಾರ್ಗವಾಗಿ ಬಜಾಲ್ ಜೆ.ಎಮ್ ರೋಡ್ ವರೆಗೆ ರೂಟ್ ನಂ 9 ಕುಸುಮ ಎಂಬ ಬಸ್ ಸಂಚರಿಸುತ್ತಿದ್ದು ಈ ಬಸ್ಸಿನ ಸೇವೆಯನ್ನು ಪಡೀಲುವರೆಗೆ ವಿಸ್ತರಿಸಬೇಕೆಂಬ ಕೂಗು ಜಪ್ಪಿನಮೊಗರು ಸುತ್ತಮುತ್ತಲ ಗ್ರಾಮದ ನಿವಾಸಿಗಳಲ್ಲಿ ಕೇಳಿ ಬರುತ್ತಿದೆ. ಜಿಲ್ಲಾಡಳಿತ, ಸಾರಿಗೆ ಇಲಾಖೆ ಈ ಕೂಡಲೇ ಜಪ್ಪಿನಮೊಗರು ಮಾರ್ಗವಾಗಿ ಸಂಚರಿಸುವ ಈ ಬಸ್ಸುಗಳ ಸೇವೆಯನ್ನು ಜೆಎಮ್ ರೋಡಿನಿಂದ ಪಡೀಲುವರೆಗೆ ವಿಸ್ತರಿಸಲು ಕ್ರಮಕೈಗೊಳ್ಳಬೇಕೆಂದು ಸಿಪಿಐಎಂ ಬಜಾಲ್ ಜಪ್ಪಿನಮೊಗರು ವಿಭಾಗ ಸಮಿತಿ ಒತ್ತಾಯಿಸಿದೆ.
ಜಪ್ಪಿನಮೊಗರು ಗ್ರಾಮದಲ್ಲಿ ವಾಸಿಸುವ ನಾಗರೀಕರಿಗೆ ಪಡೀಲು ಪ್ರದೇಶಕ್ಕೆ ತೆರಳಲು ಕೇವಲ 3 ಕೀ ಮೀ ಅಂತರದ ರಸ್ತೆಯಾಗಿರುತ್ತದೆ. ಇಲ್ಲಿ ಮಂಗಳೂರು ಬೆಂಗಳೂರು ಹೈವೇ ರಸ್ತೆ ಸಹಿತ ಮಂಗಳೂರು ಜಂಕ್ಷನ್ ರೈಲು ನಿಲ್ದಾಣ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ತೀರಾ ಅಗತ್ಯವಿರುವ ಹಲವು ಪ್ರಮುಖ ಕೇಂದ್ರಗಳು ,ಸರಕಾರಿ ಕಚೇರಿಗಳಿವೆ. ಆದರೆ ಇಷ್ಟು ಹತ್ತಿರುವಿರುವ ಪ್ರಮುಖ ಕೇಂದ್ರಗಳಿಗೆ ತೆರಳಲು ಸರಿಯಾದ ಸಾರಿಗೆ ವ್ಯವಸ್ಥೆಗಳಿಲ್ಲದೆ ಜನ ಸಂಕಷ್ಟ ಅನುಭವಿಸುವಂತಾಗಿದೆ. ಈಗಾಗಲೇ ಈ ಭಾಗವಾಗಿ ಸಂಚರಿಸುವ ರೂಟ್ ನಂಬರ್ 9 ಕುಸುಮ ಎಂಬ ಹೆಸರಿನ ಬಸ್ಸು ಕೇವಲ ಬಜಾಲ್ ಜೆ.ಎಮ್ ರೋಡ್ ವರೆಗೆ ಮಾತ್ರ ಸಂಚರಿಸುತ್ತದೆ. ಇನ್ನು ಈ ಕಚೇರಿಗಳಿಗೆ ತೆರಳಬೇಕಾದರೆ ಮತ್ತೆ ಅಲ್ಲಿಂದ ಬಸ್ಸು ಬದಲಾಯಿಸಬೇಕಾಗಿದ್ದು ಒಟ್ಟು ಎರಡೆರಡು ಬಸ್ಸನ್ನು ಹತ್ತಬೇಕಾದ ಪರಿಸ್ಥಿತಿ ಎದುರಾಗಿದೆ. ಇದರಿಂದ ಜಪ್ಪಿನಮೊಗರು ಸಹಿತ ಸುತ್ತಮುತ್ತಲ ಪ್ರದೇಶದ ನಿವಾಸಿಗಳು ಬಹಳಷ್ಟು ಸಮಸ್ಯೆಗಳನ್ನು ಅನುಭವಿಸುವಂತಾಗಿದೆ. ದೂರದ ಊರಿಗಳಿಗೆ ಸಂಚರಿಸಲು ರೈಲು ನಿಲ್ದಾಣಕ್ಕಾಗಲೀ, ಬೆಂಗಳೂರಿಗೆ ತೆರಳಲು ಬಳಸುವ ಹೈವೆಗೆ ತಲುಪಲು ಜಪ್ಪಿನಮೊಗರು ಮಾತ್ರವಲ್ಲದೆ ಉಳ್ಳಾಲ ಭಾಗಗಳಿಂದಲೂ ಬರುವ ಪ್ರಯಾಣಿಕರಿಗೆ ಜಪ್ಪಿನಮೊಗರು ರಸ್ತೆ ಮೂಲಕ ಸಾಗೀದರೆ ಅತೀ ಹತ್ತಿರ ಹಾಗೂ ಸುಲಭವಾಗಿ ಸಂಚರಿಸಬಹುದಾಗಿದೆ. ಈ ಭಾಗದ ಪ್ರಯಾಣಿಕರು ರೈಲು ನಿಲ್ದಾಣ ಸಹಿತ ಜಿಲ್ಲಾಧಿಕಾರಿಗಳ ಕಚೇರಿ ತಲುಪಲು ಆಟೋ ಪ್ರಯಾಣಕ್ಕೆ ಅವಲಂಭಿಸಬೇಕಾಗಿರುವುದರಿಂದ ತಮ್ಮ ಹೆಚ್ಚಿನ ದುಡ್ಡನ್ನು ಸಣ್ಣ ಅಂತರದ ಪ್ರಯಾಣಕ್ಕೆ ವ್ಯಯಿಸಬೇಕಾಗಿದೆ. ಈ ವಿಚಾರಕ್ಕೆ ಸಂಬಂಧಿಸಿ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ಈ ಎಲ್ಲಾ ಹಿನ್ನಲೆಯಲ್ಲಿ ಜಿಲ್ಲಾಡಳಿತ, ಸಾರಿಗೆ ಇಲಾಖೆ ಸ್ಟೇಟ್ ಬ್ಯಾಂಕ್ ನಿಂದ ಜಪ್ಪಿನಮೊಗರು ಮಾರ್ಗವಾಗಿ ಬಜಾಲ್ ಜೆಎಮ್ ರೋಡ್ ವರೆಗೆ ಸಂಚರಿಸುವ ರೂಟ್ ನಂಬರ್ 9 ಕುಸುಮ ಬಸ್ ಸೇವೆಯನ್ನು ಪಡೀಲುವರೆಗೆ ವಿಸ್ತರಿಸಲು ಕ್ರಮಕೈಗೊಳ್ಳಬೇಕೆಂದು ಈ ಮೂಲಕ ಸಾರ್ವಜನಿಕ ಹಿತಾಸಕ್ತಿಯ ಪರವಾಗಿ ಆಗ್ರಹಿಸುತ್ತಿದ್ದೇವೆ ಎಂದು ಸಿಪಿಐಎಂ ಬಜಾಲ್ ಜಪ್ಪಿನಮೊಗರು ವಿಭಾಗ ಸಮಿತಿ ಒತ್ತಾಯಿಸಿದೆ ಎಂದು ಸಿಪಿಐಎಂ ನಗರ ಸಮಿತಿ ಮುಖಂಡ ದಿನೇಶ್ ಶೆಟ್ಟಿ ಜಪ್ಪಿನಮೊಗರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ
