21.4 C
Karnataka
Tuesday, December 3, 2024

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ:ನಿರ್ಮಲಾ ಸೀತಾರಾಮನ್

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ ಇದರ ವತಿಯಿಂದ ಸ್ವ-ಸಹಾಯ ಸಂಘಗಳ ಸದಸ್ಯರಿಗೆ ಲಾಭಾಂಶ ವಿತರಣಾ ಕಾರ್ಯಕ್ರಮ ಗುರುವಾರ ಅಮೃತ ವರ್ಷಿಣಿ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತಾಡಿದ ಅವರು, “ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗ್ರಾಮೀಣ ಭಾಗದ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ನಡೆಯುತ್ತಿದೆ. ಇಂದು ದೇಶದಲ್ಲಿ ಕೃಷಿ ಕ್ಷೇತ್ರದ ಕ್ರಾಂತಿಯಾಗಿದೆ. ದೇಶದ ಜನರಿಗೆ ಸಾಕಾಗುವಷ್ಟು ಅಕ್ಕಿ, ಧವಸ ಧಾನ್ಯ ಉತ್ಪಾದನೆಯಾಗುತ್ತಿದೆ. ರೈತರು ಸಶಕ್ತರಾಗಿದ್ದಾರೆ. ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಅವರು ಈ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ“ ಎಂದರು.


”ಗ್ರಾಮಾಭಿವೃದ್ಧಿ ಯೋಜನೆಯಿಂದ ಫಲ ಪಡೆದು ಲಾಭಾಂಶವನ್ನು ಸ್ವೀಕರಿಸಿರುವ ಎಲ್ಲರಿಗೂ ವಂದನೆಗಳು. ಇಂಥ ಕಾರ್ಯಕ್ರಮಗಳಿಂದ ಇಂದು ಮಹಿಳೆಯರು ಸ್ವಯಂ ಗೌರವದಿಂದ ನಾವೂ ದುಡಿಯುತ್ತಿದ್ದೇವೆ ಎಂದು ಹೇಳಬಹುದಾಗಿದೆ. ನೀವು ಕೊಡುವ ಹಣ ಲಾಭದ ರೂಪದಲ್ಲಿ ಗೌರವಪೂರ್ವಕವಾಗಿ ನಿಮಗೆ ವಾಪಾಸ್ ಬಂದಿದೆ.ಗ್ರಾಮೀಣ ಅಭಿವೃದ್ಧಿಗೆ ಜನರ ಹಣ ಬಳಕೆಯಾಗುತ್ತಿದೆ. ಕೋವಿಡ್ ಸಮಯದಲ್ಲಿ ಆತ್ಮನಿರ್ಭರ್ ಭಾರತ್ ಘೋಷಣೆ ಮಾಡಿದ ಬಳಿಕ 5 ಮಿನಿ ಬಜೆಟ್ ಗಳನ್ನು ರಾಷ್ಟ್ರಕ್ಕೆ ಅರ್ಪಿಸಿದ್ದೇವೆ. ಗ್ರಾಮೀಣ ಭಾಗದ ಮಹಿಳೆಯರು ತಮ್ಮ ಗ್ರಾಮದ ಅಭಿವೃದ್ಧಿಗೆ ಕಾರಣರಾಗುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಕನಸು ಕೂಡ ಇದೇ ಆಗಿದೆ. ಹೆಣ್ಮಕ್ಕಳು ನಾಯಕತ್ವ ವಹಿಸಿದರೆ ಏನಾಗುತ್ತೆ ಅನ್ನುವುದಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉತ್ತಮ ಉದಾಹರಣೆ. ಧರ್ಮಸ್ಥಳ ಇದು ಗ್ರಾಮೀಣ ಯೋಜನೆಯ ಪ್ರಯೋಗಲಾಯ ಎಂದರೆ ತಪ್ಪಾಗದು“ ಎಂದು ಯೋಜನೆಯ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಮಾತನಾಡಿ, ”ನಿರ್ಮಲಾ ಸೀತಾರಾಮನ್ ಅವರು ದೇಶದ ಆರ್ಥಿಕ ಮಂತ್ರಿಯಾದರೆ ನಾವು ನಮ್ಮ ಸಂಘದ ಮಹಿಳೆಯರನ್ನು ಆರ್ಥಿಕ ಮಂತ್ರಿಯನ್ನಾಗಿ ಮಾಡಿದ್ದೇವೆ. ಯೋಜನೆಯಲ್ಲಿ 62% ಮಹಿಳೆಯರು ಇದ್ದರೆ 38% ಮಂದಿ ಪುರುಷರು ಇದ್ದಾರೆ. ಮಹಿಳೆಯರನ್ನು ಮಾತ್ರವಲ್ಲದೆ ಗಂಡಸರನ್ನು ನಂಬಿ ಸಾಲ ಕೊಟ್ಟವರು ನಾವು. ಎಲ್ಲ ಸಂಘಗಳು ಶಿಸ್ತುಬದ್ಧವಾಗಿ ಕೆಲಸ ಮಾಡಿದರೆ ಏನು ಪ್ರಯೋಜನವಾಗುತ್ತದೆ ಅನ್ನುವುದಕ್ಕೆ ಲಾಭಾಂಶ ವಿತರಣೆ ಕಾರ್ಯಕ್ರಮ ಸಾಕ್ಷಿ. ಬ್ಯಾಂಕ್ ನಿಮ್ಮನ್ನು ನಂಬಿ ನಮಗೆ ಸಾಲ ಕೊಟ್ಟಿದೆ. ನಾವು ನಿಮ್ಮನ್ನು ನಂಬಿ ಸಾಲ ಕೊಟ್ಟಿದ್ದೇವೆ. ಹೆಣ್ಮಕ್ಕಳ ಕೈಗೆ ಹಣ ಕೊಟ್ಟಲ್ಲಿ ಹಣದ ಸರಿಯಾದ ಬಳಕೆಯಾಗುತ್ತದೆ. ನೀವು ಗೃಹಲಕ್ಷ್ಮಿಯಾಗಿದ್ದೀರಿ. ನಿಮ್ಮಿಂದ ಸಂಸ್ಥೆಗೆ ಕೀರ್ತಿ ಬಂದಿದೆ“ ಎಂದರು.
ಬಳಿಕ ಸಂಘಗಳ ಸದಸ್ಯರಿಗೆ ಲಾಭಾಂಶದ ಚೆಕ್ ಅನ್ನು ವಿತರಣೆ ಮಾಡಲಾಯಿತು.
ನಬಾರ್ಡ್ ಬ್ಯಾಂಕ್ ಅಧ್ಯಕ್ಷ ಶಾಜಿ ಕೆ.ವಿ. ಮಾತಾಡಿ, “1992ರಲ್ಲಿ ನಬಾರ್ಡ್ ಪ್ರಾರಂಭಗೊಂಡಿದ್ದು ಅಂದಿನಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜೊತೆಗೂಡಿ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದೆ. ಈಗ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮವಾಗಿ ನಡೆಯುತ್ತಿರುವುದು ಖುಷಿಯ ವಿಚಾರ. ಸಣ್ಣ ಮಧ್ಯಮ ಉದ್ಯಮಗಳಿಗೆ ಸ್ವ-ಸಹಾಯ ಸಂಘಗಳು ಬೆಂಬಲ ನೀಡುತ್ತಿರುವ ಕಾರಣ ಗ್ರಾಮೀಣ ಮಟ್ಟದಲ್ಲಿ ಬಹಳಷ್ಟು ಅಭಿವೃದ್ಧಿಯಾಗಿದೆ. 600 ಕೋಟಿಯಷ್ಟು ದೊಡ್ಡ ಮೊತ್ತ ಲಾಭವನ್ನು ಸ್ವ-ಸಹಾಯ ಸಂಘದ ಸದಸ್ಯರಿಗೆ ಹಂಚುವ ಸಂಘದ ಕ್ರಮ ಶ್ಲಾಘನೀಯವಾದುದು“ ಎಂದರು.
ವೇದಿಕೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷೆ ಹೇಮಾವತಿ ವಿ. ಹೆಗ್ಗಡೆ, ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ಉಪಸ್ಥಿತರಿದ್ದರು.
ಯೋಜನೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್. ಸ್ವಾಗತಿಸಿದರು. ಶಾ೦ತಾರಾಮ್ ಆರ್.ಪೈ, ಪ್ರವೀಣ್ ಎಂ.ಸಿ. ಕಾರ್ಯಕ್ರಮ ನಿರೂಪಿಸಿದರು. ಆನಂದ ಸುವರ್ಣ ಧನ್ಯವಾದ ಸಮರ್ಪಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles