ಮಂಗಳೂರು:-ಮೂಲ್ಕಿ ಮತ್ತು ಮೂಡಬಿದ್ರೆ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಡಯಾಲಿಸಿಸ್ ಕೇಂದ್ರಗಳನ್ನು ಶೀಘ್ರದಲ್ಲೇ ಸ್ಥಾಪಿಸಲಾಗುವುದು ಎಂದು ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಅವರು ಬುಧವಾರ ಮೂಲ್ಕಿ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಮಾತನಾಡಿದರು. ಮೂಲ್ಕಿ ಸಮುದಾಯ ಆಸ್ಪತ್ರೆಗೆ ಈಗಾಗಲೇ ಎಂ.ಆರ್.ಪಿ.ಎಲ್ ಸಂಸ್ಥೆಯು ಒಂದು ಡಯಾಲಿಸಿಸ್ ಯಂತ್ರವನ್ನು ನೀಡಿದೆ. ರಾಜ್ಯ ಸರಕಾರದಿಂದ ಎರಡು ಡಯಾಲಿಸಿಸ್ ಯಂತ್ರಗಳನ್ನು ನೀಡಲಾಗುವುದು. ಇದಕ್ಕಾಗಿ ಎರಡೂ ಆಸ್ಪತ್ರೆಗಳಿಗೆ ಅಗತ್ಯ ವೈದ್ಯರನ್ನು ಮತ್ತು ತಂತ್ರಜ್ಞರನ್ನು ನೇಮಿಸಲಾಗುವುದು ಎಂದು ಸಚಿವರು ಹೇಳಿದರು. ಇದರಿಂದ ಇಲ್ಲಿನ ರೋಗಿಗಳು ಡಯಾಲಿಸಿಸ್ ಗೆ ಮಂಗಳೂರಿಗೆ ಹೋಗಬೇಕಾದ ಅನಿವಾರ್ಯತೆ ತಪ್ಪಲಿದೆ ಎಂದರು.
ಆಸ್ಪತ್ರೆಯಲ್ಲಿ ಡಯಾಬಿಟಿಸ್ ಗೆ ಸಂಬಂಧಿಸಿದ ಎಲ್ಲ ಔಷಧಗಳನ್ನು ಸಂಗ್ರಹಿಸಿಡಬೇಕು. ಆಸ್ಪತ್ರೆಯ ಅಭಿವೃದ್ಧಿಗೆ ಬೇಕಾದ ಅನುದಾನ ನೀಡಲಾಗುವುದು. ಇಲ್ಲಿಗೆ ಮಕ್ಕಳು, ಸ್ತ್ರೀರೋಗ ತಜ್ಞರನ್ನು ನೇಮಿಸಬೇಕೆಂಬ ಬೇಡಿಕೆಯಿದ್ದು, ಈ ಬಗ್ಗೆ ಪರಿಶೀಲಿಸಲಾಗುವುದು. ಆಸ್ಪತ್ರೆಯ ಸಂಪೂರ್ಣ ಬಳಕೆಗೆ ಒತ್ತು ನೀಡಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಉಮಾನಾಥ ಕೋಟ್ಯಾನ್, ಮಂಗಳೂರು ಉಪವಿಭಾಗಾಧಿಕಾರಿ ಹರ್ಷವರ್ಧನ್, ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರವಾಸಿ ಮಂದಿರ ಕಾಮಗಾರಿ
ಸಚಿವರು ಇದಕ್ಕೂ ಮೊದಲು ಮೂಲ್ಕಿ ರಾಷ್ಟ್ರೀಯ ಹೆದ್ದಾರಿ ಸಮೀಪ ನಿರ್ಮಾಣಗೊಳ್ಳುತ್ತಿರುವ ಪ್ರವಾಸಿ ಮಂದಿರ ನಿವೇಶನಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದರು.ಬಳಿಕ ಮೂಲ್ಕಿ ಮಿನಿ ವಿಧಾನಸೌಧ ಕಾಮಗಾರಿಯನ್ನು ಪರಿಶೀಲಿಸಿದರು. ಮೂಲ್ಕಿ ನಗರ ಪಂಚಾಯತ್ ನೂತನ ಕಾರ್ಯಾಲಯ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು