ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಸಹಯೋಗ ದೊಂದಿಗೆ ಪತ್ರಕರ್ತರು ಗ್ರಾಮ ವಾಸ್ತವ್ಯ ಮಾಡಿರುವ ಕುತ್ಲುರು ಸರಕಾರಿ ಶಾಲಾ ಮಕ್ಕಳಿಗೆ ಬಿಎಎಸ್ ಎಫ್ ಇಂಡಿಯಾ ಲಿಮಿಟೆಡ್ ನ ಸಿಎಸ್ ಆರ್ ನಿಧಿಯಿಂದ ನೋಟ್ ಬುಕ್, ಕಲಿಕಾ ಸಾಮಾಗ್ರಿ ವಿತರಣಾ ಹಾಗೂ ಶಾಲಾ ಮಕ್ಕಳ ಬ್ಯಾಂಡ್ ಸೆಟ್ ಸಮವಸ್ತ್ರ ವಿತರಣಾ ಕಾರ್ಯಕ್ರಮ ನಗರದ ಪತ್ರಿಕಾ ಭವನಸಲ್ಲಿ ಶುಕ್ರವಾರ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಡಾ.ರಾಜೇಂದ್ರ ಶಾಲಾ ಮಕ್ಕಳಿಗೆ ನೋಟ್ ಬುಕ್ ಹಸ್ತಾಂತರ ಮಾಡಿ ಮಾತನಾಡುತ್ತಾ, ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ವಿದ್ಯಾರ್ಥಿಗಳಿಗೆ ಉತ್ತಮ ವಾತವರಣ, ಪ್ರೋತ್ಸಾಹ ಅಗತ್ಯ ಈ ನಿಟ್ಟಿನಲ್ಲಿ ಕುತ್ಲೂರು ಶಾಲೆಯ ಅಭಿವೃದ್ಧಿಗೆ ನಡೆಯುತ್ತಿರುವ ಸಾಮೂಹಿಕ ಪ್ರಯತ್ನ ಶ್ಲಾಘನೀಯ ಎಂದರು.ವಿದ್ಯಾರ್ಥಿಗಳಿಗೆ ಸಮವಸ್ತ್ರ, ಬ್ಯಾಂಡ್ ಸೆಟ್ ಹಾಗೂ ಕಲಿಕಾ ಸಾಮಾಗ್ರಿ ವಿತರಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ರಾಜಲಕ್ಷ್ಮಿ ಮಾತನಾಡುತ್ತಾ, ಇತ್ತೀಚಿನ ದಿನಗಳಲ್ಲಿ ಸರಕಾರಿ ಶಾಲೆಗಳಲ್ಲಿ ತೋಟ ನಿರ್ಮಿಸಿ ಅದರ ಆದಾಯದಿಂದ ಶಾಲೆಗೆ ವಾಹನ ಖರೀದಿಸಿ ಸಾಕಷ್ಟು ಅಭಿವೃದ್ಧಿ ಆದ ಶಾಲೆಗಳ ಸಾಲಿನಲ್ಲಿ ಕುತ್ಲೂರು ಶಾಲೆಯೂ ಸೇರ್ಪಡೆಯಾಗಿದೆ.ಇದರಿಂದ ಶಿಕ್ಷಣದ ಗುಣಮಟ್ಟದಲ್ಲೂ ಉನ್ನತಿಯಾಗಲು ಸಾಧ್ಯವಾಗಿದೆ.ಕುತ್ಲೂರು ಶಾಲೆಯ ಅಭಿವೃದ್ಧಿ ಯಲ್ಲಿ ಶಾಲಾಭಿವೃದ್ಧಿ ಸಮಿತಿ ಹಾಗೂ ಸಮುದಾಯ ಸಂಘ ಸಂಸ್ಥೆಗಳ ಕೊಡುಗೆ ಮಹತ್ವದ್ದಾಗಿದೆ ಎಂದು ಶ್ಲಾಘಿಸಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬಿಎಎಸ್ ಎಫ್ ಇಂಡಿಯಾ ಲಿಮಿಟೆಡ್ ಸಂಸ್ಥೆಯ ಸೈಟ್ ಡೈರೆಕ್ಟರ್ ಶ್ರೀನಿವಾಸ್ ಪ್ರಾಣೇಶ್ ಮಾತನಾಡುತ್ತಾ, ಸಂಸ್ಥೆ ಈ ಹಿಂದೆಯೂ ಸ್ಥಳೀಯ ಶಾಲೆಗಳ ಮಕ್ಕಳಿಗೆ ವಿದ್ಯಾರ್ಥಿ ವೇತನದ ಮೂಲಕ ಪ್ರೋತ್ಸಾಹ ನೀಡುತ್ತಾ ಬಂದಿದೆ. ಈ ಬಾರಿ ಕುತ್ಲೂರು ಶಾಲಾ ಮಕ್ಕಳಿಗೆ ನೋಟ್ ಬುಕ್ ಹಾಗೂ ಕಲಿಕಾ ಸಾಮಾಗ್ರಿ ಒದಗಿಸಲು ಸಾಧ್ಯ ವಾಗಿರುವುದು ಸಂತಸ ತಂದಿದೆ ಎಂದರು.ಕುತ್ಲೂರು ಸರಕಾರಿ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಮಚಂದ್ರ ಭಟ್ ಶಾಲಾ ಅಭಿವೃದ್ಧಿ ಯಲ್ಲಿ ಕೊಡುಗೆ ನೀಡಿದ ಸಂಘ ಸಂಸ್ಥೆಗಳು, ಪತ್ರಕರ್ತರ ಸಂಘದ ಸಹಾಯಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಅಧ್ಯಕ್ಷತೆವಹಿಸಿದ್ದರು.
ಕಾಸರಗೋಡು ಜಿಲ್ಲಾ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನೀಡಲಾಗುವ ದತ್ತಿನಿಧಿ ಪ್ರಶಸ್ತಿ ಮೊತ್ತ 10 ಸಾವಿರ ರೂಪಾಯಿ ಯನ್ನು ಕುತ್ಲುರು ಸರಕಾರಿ ಶಾಲೆಯ ಬ್ಯಾಂಡ್ ಸೆಟ್ ಸಮವಸ್ತ್ರಕ್ಕೆ ನೀಡುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ತಿಳಿಸಿದರು.
ಸಮಾರಂಭದಲ್ಲಿ ಬಿಎಎಸ್ ಎಫ್ ಎಚ್ ಆರ್ ವಿಭಾಗದ ಮುಖ್ಯಸ್ಥ ಸಂತೋಷ್ ಪೈ, ಮತ್ತು ಮೈಕಲ್ ಡಿ ಸೋಜ,ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ,ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ಉಪಸ್ಥಿತರಿದ್ದರು. ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್ ಕಾರ್ಯಕ್ರಮ ನಿರೂಪಿಸಿದರು . ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು.ಕುತ್ಲುರು ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
