ಮಂಗಳೂರು : ಜಮೀನು ದಾಖಲೆಗಳ 1-5 ಪ್ರಕರಣಗಳ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ.ಪಿ ಸೂಚಿಸಿದ್ದಾರೆ.
ಅವರು ಬಂಟ್ವಾಳ ತಾಲೂಕು ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಸೂಚನೆ ನೀಡಿದರು.
ಭೂ ಮಂಜೂರಾತಿ ನಂತರ ಸಾರ್ವಜನಿಕರು 1-5 ಮಾಡಲು ಸಲ್ಲಿಸಿರುವ ಸಾಕಷ್ಟು ಅರ್ಜಿಗಳು ಬಾಕಿ ಇದೆ. ಇದರಿಂದ ಸಾರ್ವಜನಿಕರಿಗೆ ಬಹಳಷ್ಟು ತೊಂದರೆಗಳಾಗುತ್ತಿರುವ ಬಗ್ಗೆ ಮಾಹಿತಿ ಇದೆ. ಆದುದರಿಂದ ಎಲ್ಲಾ ತಾಲೂಕು ಕಚೇರಿಗಳಲ್ಲಿ 1-5 ಪ್ರಕರಣಗಳ ಅರ್ಜಿಗಳನ್ನು ಆದ್ಯತೆಯಲ್ಲಿ ವಿಲೇವಾರಿ ಮಾಡಬೇಕು ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ತಾಲೂಕು ಕಚೇರಿಯ ರೆಕಾರ್ಡ್ ರೂಮ್‍ಗೆ ಭೇಟಿ ನೀಡಿದ ಅವರು ದಾಖಲೆಗಳ ಡಿಜಿಟಲೈಝೇಶನ್ ಪ್ರಕ್ರಿಯೆಯನ್ನು ವೀಕ್ಷಿಸಿದರು. ಬಳಿಕ ಸರ್ವೆ ಇಲಾಖೆ ಕಚೇರಿಗೆ ಭೇಟಿ ನೀಡಿದ ಅವರು ಕಡತಗಳ ಸಂಗ್ರಹವನ್ನು ಪರಿಶೀಲಿಸಿದರು . ಸರ್ವೆ ಅರ್ಜಿ ವಿಲೇವಾರಿಯ ಮಾಹಿತಿ ಪಡೆದ ಅವರು ಯಾವುದೇ ಕಾರಣಕ್ಕೂ ಸರ್ವೆ ಕಾರ್ಯವನ್ನು ವಿಳಂಬಿಸಬಾರದೆಂದು ಅಧಿಕಾರಿಗಳಿಗೆ ಸೂಚಿಸಿದರು.ಬಂಟ್ವಾಳ ತಾಲೂಕು ತಹಶೀಲ್ದಾರ್ ಅರ್ಚನಾ ಭಟ್ ಅವರು ದಾಖಲೆಗಳ ಡಿಜಿಟಲೈಝೇಶನ್ ಪ್ರಕ್ರಿಯೆ, 1-5 ಪ್ರಕರಣಗಳ ವಿಲೇವಾರಿ ಮಾಹಿತಿಯನ್ನು ಜಿಲ್ಲಾಧಿಕಾರಿಗೆ ನೀಡಿದರು.
ಈ ಸಂದರ್ಭದಲ್ಲಿ ಭೂ ದಾಖಲೆಗಳ ಉಪನಿರ್ದೇಶಕಿ ಪ್ರಸಾದಿನಿ, ಸಹಾಯಕ ನಿರ್ದೇಶಕ ನಿಸಾರ್ ಅಹಮದ್, ಉಪತಹಶಿಲ್ದಾರ್ ನರೇಂದ್ರನಾಥ್ ಭಟ್ ಮತ್ತಿತರರು ಉಪಸ್ಥಿತರಿದ್ದರು.
