ಮಂಗಳೂರು:“ಕರಾವಳಿ ಭಾಗದಲ್ಲಿ ಅಭಿವೃದ್ಧಿ ಕುಂಠಿತವಾಗಿದ್ದು, ವ್ಯಾಪಾರ ವಹಿವಾಟುಗಳು ಕುಸಿದಿವೆ. ಇಲ್ಲಿ ಮಕ್ಕಳು ವಿದ್ಯಾಭ್ಯಾಸದಿಂದ ದೂರ ಉಳಿಯುತ್ತಿದ್ದು, ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಈ ಕಾರಣಕ್ಕಾಗಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕರಾವಳಿ ಭಾಗದ ಜನ ಬದಲಾವಣೆ ಮಾಡುವ ವಿಶ್ವಾಸವಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಶನಿವಾರ ಪ್ರತಿಕ್ರಿಯಿಸಿದರು.
ಕಾರ್ಯಕರ್ತರ ಸಮಾವೇಶವನ್ನು ಮಂಗಳೂರಿನಲ್ಲೇ ನಡೆಸಲು ತೀರ್ಮಾನ ಮಾಡಿರುವುದೇಕೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು “ರಾಜಕೀಯದಲ್ಲಿ ಯಾವುದೂ ಶಾಶ್ವತವಿಲ್ಲ. ಅಸಾಧ್ಯ ಎಂಬುದಿಲ್ಲ. ರಾಜಕಾರಣ ಎಂದರೆ ಸಾಧ್ಯತೆಗಳ ಕಲೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಜನ ಇಲ್ಲಿ ಬದಲಾವಣೆ ಮಾಡಲಿದ್ದಾರೆ ಎಂಬ ನಂಬಿಕೆ ಇದೆ. ಈ ಭಾಗದಲ್ಲಿ ನಿರುದ್ಯೋಗದ ಸಮಸ್ಯೆ ಇದೆ. ಇಲ್ಲಿ ಪಾಸಾಗುವ ಯುವಕರು ಮತ್ತು ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಬೆಂಗಳೂರು, ಮುಂಬೈ, ಸೌದಿಗೆ ಹೋಗುತ್ತಿದ್ದಾರೆ. ಎ೦ದರು.
ಈ ಭಾಗದಲ್ಲಿ ಶಾಂತಿ ಕದಡಲಾಗುತ್ತಿದೆ. ಈ ಭಾಗದಲ್ಲಿ ಬಿಜೆಪಿ ಅಭಿವೃದ್ಧಿ ವಿಚಾರ ಬಿಟ್ಟು ಭಾವನಾತ್ಮಕ ವಿಚಾರವನ್ನು ಮುಂದಿಡುತ್ತಿದೆ. ಅದಕ್ಕಾಗಿ ನಾವು ನಮ್ಮ ಪ್ರಣಾಳಿಕೆಯಲ್ಲಿ ಹೊಸ ಆಲೋಚನೆ ಮಾಡುವುದಾಗಿ ಹೇಳಿದ್ದೆವು. ನಿನ್ನೆಯ ಬಜೆಟ್ ನಲ್ಲೂ ಮೀನುಗಾರರು ಹಾಗೂ ಕರಾವಳಿ ಭಾಗದಲ್ಲಿ ಹೊಸ ನೀತಿ ತರಲು ಘೋಷಣೆ ಮಾಡಿದ್ದೇವೆ ಎ೦ದವರು ಹೇಳಿದರು.
ಜೊರೋಸಾ ಶಾಲೆ ವಿವಾದದಲ್ಲಿ ಶಾಸಕರ ವಿರುದ್ಧದ ಪ್ರಕರಣ ಹಿಂಪಡೆಯದಿದ್ದರೆ ಪ್ರತಿಭಟನೆ ಮಾಡುತ್ತೇವೆ ಎಂಬ ಬಿಜೆಪಿ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ಮಾಡುತ್ತಿರಲಿ. ಕಾನೂನಿನ ಪ್ರಕಾರ ಕ್ರಮ ವಹಿಸಲಾಗುತ್ತದೆ. ಪೊಲೀಸರು ಅವರ ಕೆಲಸ ಮಾಡುತ್ತಾರೆ. ನಾನು ಅವರ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ” ಎಂದು ತಿಳಿಸಿದರು.
