ಮಂಗಳೂರು: ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ರೋಟರ‍್ಯಾಕ್ಟ್ ಕ್ಲಬ್ ಮಂಗಳೂರು ಸಿಟಿ ಜಂಟಿ ಆಶ್ರಯದಲ್ಲಿ ಪ್ರಾಯೋಜಿಸಿದ ರಾಜ್ಯಮಟ್ಟದ 22 ನೇ ವಾರ್ಷಿಕ ಮತ್ತು 2025ನೇ ಸಾಲಿನ ಪ್ರತಿಷ್ಠಿತ “ವಂದನಾ ಪ್ರಶಸ್ತಿ” ಯನ್ನು ಬೆಂಗಳೂರು ನಗರ ಮೂಲದ ಖ್ಯಾತ ಹೋಟೆಲ್ ಉದ್ಯಮಿ ಡಾ.ಕೆ ಪ್ರಕಾಶ್ ಶೆಟ್ಟಿ ಯವರು ಹೋಟೆಲ್ ಉದ್ಯಮ ಕ್ಷೇತ್ರದಲ್ಲಿ ಸಾಧಿಸಿದ ಗಣನೀಯ ಸಾಧನೆ ಮತ್ತು ಸಮಾಜಕ್ಕೆ ನೀಡಿದ ಸುಧೀರ್ಘ ಸೇವೆ, ಕೊಡುಗೆಯನ್ನು ಪರಿಗಣಿಸಿ ನಗರದ ಹೋಟೆಲ್ ಮೋತಿಮಹಲ್ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಸಮಾರಂಭದಲ್ಲಿ ಗೌರವಿಸಿ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಲಾಯಿತು.
ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಡಾ. ಪ್ರಾಕಾಶ್ ಶೆಟ್ಟಿ ಯವರು ತಮ್ಮ ಸಾಧನೆಗೆ ದೇವರ ಅನುಗ್ರಹ, ಗುರುಗಳ ಮಾರ್ಗದರ್ಶನ, ಉಪದೇಶ, ಹಿರಿಯರ ಆಶೀರ್ವಾದ, ಗ್ರಾಹಕರ ವಿಶ್ವಾಸ, ಕುಟುಂಬ, ಮಿತ್ರರ ಸಹಕಾರ, ಪ್ರೋತ್ಸಾಹ ಮತ್ತು ಉದ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ವ್ಯವಹಾರ ದಕ್ಷತೆ, ಪ್ರಾಮಾಣಿಕತೆ, ಶ್ರಮ ಕಾರಣ ಎಂದು ನುಡಿದು ರೋಟರಿ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿ. ಸಾಧಕರನ್ನು ಗುರುತಿಸಿ, ಸನ್ಮಾನಿಸಿ ಪ್ರಶಸ್ತಿ ಪ್ರಧಾನ ಮಾಡುವ ರೋಟರಿ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ನುಡಿದು ಪ್ರಶಸ್ತಿ ಸ್ವೀಕರಿಸಿದ ಬಳಿಕ ಇನ್ನಷ್ಟು ಸಾಧಿಸಲು ಪ್ರೇರಣೆ ಆಗುತ್ತಿದೆ ಎಂದು ನುಡಿದರು.
ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾದ ಡಾ. ದೇವದಾಸ್ ರೈ ವರು ಪ್ರಶಸ್ತಿ ಪ್ರಧಾನದ ವಿಧಿ ವಿಧಾನವನ್ನು ನೆರವೇರಿಸಿ ವಂದನಾ ಪ್ರಶಸ್ತಿಯು ತಮ್ಮ ಸಂಸ್ಥೆಯ ವೃತ್ತಿಪರ ಸೇವೆ ಯೋಜನೆಯ ಅಂಗವಾಗಿದ್ದು, ಈ ವಾರ್ಷಿಕ ಪ್ರಶಸ್ತಿಯನ್ನು ಸಾಧಕರನ್ನು ಗುರುತಿಸಿ ವಿವಿಧ ಕ್ಷೇತ್ರದಲ್ಲಿ ಸಾಧಿಸಿದ ಸಾಧನೆಯನ್ನು ಪರಿಗಣಿಸಿ ಆಯ್ಕೆ ಮಾಡಲಾಗುವುದು ಎಂದು ಮಾಹಿತಿ ನೀಡಿ ಪ್ರಸ್ತುತ ಸಾಲಿನ ಪ್ರಶಸ್ತಿ ವಿಜೇತರಾದ ಡಾ. ಪ್ರಕಾಶ್ ಶೆಟ್ಟಿಯವರು ಹೋಟೆಲ್ ಉದ್ಯಮ ಕ್ಷೇತ್ರದಲ್ಲಿ ಸಾಧಿಸಿದ ಸಾಧನೆಯನ್ನು ಅಭಿನಂದಿಸಿದರು. ರೋರ‍್ಯಾಕ್ಟ್ ಸಂಸ್ಥೆಯ ಅಧ್ಯಕ್ಷ ಬಿದ್ದಪ್ಪ ರವರು ಪ್ರಶಸ್ತಿ ವಿಜೇತರ ಪರಿಚಯ ಮತ್ತು ಸಾಧನೆಗಳ ಮಾಹಿತಿ ನೀಡಿದರು. ಸಹಾಯಕ ಗವರ್ನರ್‌ರಾದ ಕೆ.ಎಮ್ ಹೆಗ್ಡೆಯವರು ಅಭಿನಂದನಾ ಭಾಷಣ ಮಾಡಿದರು.
ರೋರ‍್ಯಾಕ್ಟ್ ಸಂಸ್ಥೆಯ ಜಿಲ್ಲಾ ಪ್ರತಿನಿಧಿಯವರಾದ ಸಂಜಯ್ ರವರು ಸಂಸ್ಥೆಯ ಸಾಪ್ತಾಹಿಕ ಗೃಹ ವಾರ್ತಾ ಪತ್ರಿಕೆ “ಸೆಂಟೊರ್” ಬಿಡುಗಡೆಗೊಳಿಸಿದರು. ರೋಟರಿ ಮಂಗಳೂರು ಸೆಂಟ್ರಲ್‌ನ ಅಧ್ಯಕ್ಷರಾದ ಬ್ರೀಯಾನ್ ಪಿಂಟೋ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸುಧೀರ್ ಶೆಟ್ಟಿಯವರನ್ನು ಸಂಸ್ಥೆಗೆ ನೂತನ ಸದಸ್ಯರಾಗಿ ಸೇರ್ಪಡಿಸಲಾಯಿತು.
ಕಾರ್ಯದರ್ಶಿ ರಾಜೇಶ್ ಸಿತಾರಾಮ್ ,ಲೆಕ್ಕ ಪರಿಶೋಧಕ ನಿತಿನ್ ಶೆಟ್ಟಿ, ಸಂಸ್ಥೆಯ ಮಾಜಿ ಅಧ್ಯಕ್ಷ ರಾಜೇಶ್ ಶೆಟ್ಟಿ ಚುನಾಯಿತ ಅಧ್ಯಕ್ಷ ಭಾಸ್ಕರ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು ರೋಟರ‍್ಯಕ್ಟ್ ಸಂಸ್ಥೆಯ ಕಾರ್ಯದರ್ಶಿ ಅಕ್ಷಯ್ ರೈ ವಂದಿಸಿದರು.
