ಮಂಗಳೂರು: ಕನ್ನಡ ಚಿತ್ರ ನಟ ಡಾ. ರಾಜ್‍ಕುಮಾರ್ ಅವರು ತಾನು ನಟಿಸಿದ ಚಲನಚಿತ್ರಗಳಲ್ಲಿ ಅಥವಾ ವೈಯಕ್ತಿಕ ಬದುಕಿನಲ್ಲಿ ಸಮಾಜಕ್ಕೆ ಕೆಡುಕನ್ನುಂಟು ಮಾಡುವ ಯಾವುದೇ ಅಂಶಗಳನ್ನು ತೋರಿಸದೆ, ತನ್ನ ಬದುಕನ್ನೇ ಆದರ್ಶವನ್ನಾಗಿ ತೋರಿಸಿದ್ದಾರೆ ಎಂದು ಕರ್ನಾಟಕ ಗೇರು ಅಭಿವೃಧ್ದಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ , ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಡಾ. ಪಿ. ದಯಾನಂದ ಪೈ ಪಿ ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಇವರ ಸಹಕಾರದೊಂದಿಗೆ ಕನ್ನಡ ಚಿತ್ರನಟ ಡಾ. ರಾಜಕುಮಾರ್ ಜನ್ಮದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಪ್ರತಿಮ ನಟನಾಗಿ ಅವರು ಸಮಾಜಕ್ಕೆ ನೀಡಿದ ಸಂದೇಶ ಸ್ಮರಣೀಯ. ರಾಜಕುಮಾರ್ ಅವರನ್ನು ಸಮಾಜದ ಮಾದರಿ ವ್ಯಕ್ತಿ ಅಂದರೆ ತಪ್ಪಾಗಲಾರದು. ಅವರ ಜೀವನ ಚರಿತ್ರೆಯನ್ನು ಇಂದಿನ ಯುವ ಪೀಳಿಗೆ ಸ್ಮರಿಸುವುದು ಬಹಳ ಅತ್ಯಗತ್ಯ. ಅವರ ಆದರ್ಶ, ಜೀವನ ಮೌಲ್ಯಗಳು ನಮ್ಮಲ್ಲಿ ಅಳವಡಿಸಿಕೊಂಡರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಅವರು ಹೇಳಿದರು.
ಉಪನ್ಯಾಸ ನೀಡಿದ ಹಿರಿಯ ಪತ್ರಕರ್ತ, ಮಂಗಳೂರು ಪ್ರೆಸ್‍ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಮಾತನಾಡಿ, ಡಾ. ರಾಜಕುಮಾರ್ ಕೇವಲ ನಟ, ಗಾಯಕನಾಗಿ ಮಾತ್ರ ಗುರುತಿಸಿಕೊಳ್ಳದೆ ಇಡೀ ನಾಡಿಗೆ ಮೌಲ್ಯಯುತವಾದ ಸಂದೇಶ ನೀಡಿದ ಮಹಾನ್ ಶಕ್ತಿ. ಧೂಮಪಾನ, ಮದ್ಯಪಾನ ಸೇರಿದಂತೆ ತಮ್ಮ ಸಿನಿಮಾದಲ್ಲಿ ಯುವಜನತೆ ಮೇಲೆ ಕೆಟ್ಟ ಪ್ರಭಾವ ಬೀರುವ ಯಾವ ದೃಶ್ಯಗಳನ್ನು ಮಾಡಲು ಒಪ್ಪಿಕೊಂಡಿಲ್ಲ. ಅವರು ಕನ್ನಡ, ನಾಡಿನ ಸಂಸ್ಕೃತಿಗೆ ಸಿನಿಮಾ ಮೂಲಕ ಸೇವೆಯನ್ನು ಸಲ್ಲಿಸಿದ್ದಾರೆ ಎಂದು ಹೇಳಿದರು.
ಡಾ. ರಾಜ್ ನಟಿಸಿದ ‘ಅನುರಾಗ ಅರಳಿತು’ ಚಲನಚಿತ್ರವು 9 ಭಾಷೆಗಳಿಗೆ ಡಬ್ಬಿಂಗ್ ಆಯಿತು. ‘ಬೇಡರ ಕಣ್ಣಪ್ಪ’ ಚಿತ್ರವು ಇಡೀ ಭಾರತ ದೇಶದಲ್ಲಿ ಪರಿಣಾಮ ಬೀರಿತು. ‘ಬಂಗಾರದ ಮನುಷ್ಯ’ ಚಿತ್ರವು ಗ್ರಾಮೀಣ ಬದುಕಿಗೆ ಜನರನ್ನು ಹಿಂದಿರುಗಿಸಿತು . ಕೃಷಿಗೆ ಪ್ರೋತ್ಸಾಹ ನೀಡಿದ ಅವರ ಚಿತ್ರವು ನಗರಗಳಿಗೆ ಹೋಗಿದ್ದ ಹಲವು ಯುವಕರನ್ನು ಮತ್ತೆ ಊರಿನ ವೃತ್ತಿಯತ್ತ ಸೆಳೆಯುವಲ್ಲಿ ಯಶಸ್ವಿಯಾಯಿತು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ರಥಬೀದಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪೆÇ್ರ. ಜಯಕರ ಭಂಡಾರಿ ಮಾತನಾಡಿ, ಇಂದಿನ ಕನ್ನಡ ಚಿತ್ರರಂಗದ ನಟರ ತೆರೆಯ ಮೇಲಿನ ಪಾತ್ರಕ್ಕೂ ತೆರೆಯ ಹಿಂದಿನ ಪಾತ್ರಕ್ಕೂ ತುಂಬಾ ವ್ಯತ್ಯಾಸ ಇದೆ. ಆದರೆ ಕನ್ನಡದ ಮೇರು ನಟ ಎಂಬ ಖ್ಯಾತಿಯ ಡಾ ರಾಜಕುಮಾರ್ ತೆರೆಯ ಮುಂದೆ ಇದ್ದ ಹಾಗೆಯೇ ನಿಜ ಜೀವನದಲ್ಲಿಯೂ ಬದುಕಿದವರು. ಅಂದಿನ ಕಾಲದ ಸಿನಿಮಾಗಳ ಮೂಲಕ ಸಾಮಾಜಿಕ ಪರಿವರ್ತನೆಗೆ ಕಾರಣರಾಗಿ, ಸಾಂಸ್ಕøತಿಕ ಶಕ್ತಿಯನ್ನು ನಾಡಿಗೆ ತೋರಿಸಿದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಜ್ಯೋತಿಪ್ರಿಯ ಉಪಸ್ಥಿತರಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ಎ. ಖಾದರ್ ಶಾ ಸ್ವಾಗತಿಸಿ, ಕಾಲೇಜಿನ ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ. ಕೃಷ್ಣಪ್ರಭಾ ವಂದಿಸಿದರು. ಸ್ಶೆದುದ್ದೀನ್ ಕಾರ್ಯಕ್ರಮ ನಿರೂಪಿಸಿದರು.
