21 C
Karnataka
Saturday, November 23, 2024

ನೀರಿನ ಸಮಸ್ಯೆ ಎದುರಾದರೆ ಅಧಿಕಾರಿಗಳೇ ಹೊಣೆ: ಜಿಲ್ಲಾಧಿಕಾರಿ ಎಚ್ಚರಿಕೆ

ಮಂಗಳೂರು: ಬೇಸಿಗೆ ಆರಂಭವಾಗುತ್ತಿದ್ದು, ಸಾರ್ವಜನಿಕರಿಗೆ, ಜನ ಜಾನುವಾರುಗಳಿಗೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಆಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬರ ಪರಿಸ್ಥಿತಿ ನಿರ್ವಹಣೆ ಕುರಿತು ಹಮ್ಮಿಕೊಂಡಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕುಡಿಯುವ ನೀರಿನ ಲಭ್ಯತೆ ಹಾಗೂ ಸಮಸ್ಯಾತ್ಮಕ ಏರಿಯಾಗಳು ಹಾಗೂ ಗ್ರಾಮಗಳನ್ನು ಗುರುತಿಸಿಕೊಳ್ಳಬೇಕು. ನೀರು ಪೂರೈಕೆಗೆ ಪರ್ಯಾಯ ಮೂಲಗಳನ್ನು ಗುರುತಿಸಿಡಬೇಕು. ಅಗತ್ಯ ಬಿದ್ದರೆ ಖಾಸಗಿ ಬೋರ್‍ವೆಲ್‍ಗಳಿಂದಲೂ ನೀರು ಪಡೆಯಲು ಕ್ರಮ ವಹಿಸಬೇಕು. ನೀರಿನ ಸಮಸ್ಯೆ ಎದುರಾದರೆ ಅಧಿಕಾರಿಗಳೇ ಜವಾಬ್ದಾರರು ಎಂದು ಅವರು ತಿಳಿಸಿದರು.
ಕುಡಿಯುವ ನೀರಿನ ಸಮಸ್ಯೆ ಎದುರಾದರೆ ಟ್ಯಾಂಕರ್ ಮೂಲಕ ನೀರು ನೀಡಲು ಅಗತ್ಯ ಇರುವ ಕಡೆಗೆ ಟೆಂಡರ್ ಕರೆದು ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಗ್ರಾಮಾಂತರ ಪ್ರದೇಶಗಳ 39 ಗ್ರಾಮಗಳಲ್ಲಿ ಹಾಗೂ ನಗರ, ಪಟ್ಟಣ ಪ್ರದೇಶಗಳ 112 ವಾರ್ಡುಗಳಲ್ಲಿ ಮುಂಬರುವ ತಿಂಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗುವ ಸಾಧ್ಯತೆ ಅಂದಾಜಿಸಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದರೆ ತಿಳಿಸಲು ಹೆಲ್ಪ್‍ಲೈನ್ ತೆರೆದು, ಸಿಬ್ಬಂದಿ ನೇಮಕ ಮಾಡಬೇಕು. ಕುಡಿಯುವ ನೀರಿನ ಪೂರೈಕೆ ಮಾಡುವ ನೀರನ್ನು ಅದರ ಶುದ್ಧತೆ ಹಾಗೂ ಗುಣಮಟ್ಟ ಕುರಿತು ಪರಿಶೀಲನೆ ನಡೆಸಬೇಕು ಎಂದರು.
ಹೊಸ ಬೋರ್‍ವೆಲ್‍ಗಳನ್ನು ಕೊರೆಯಲು ಅಗತ್ಯ ಇರುವ ಕಡೆ ಗುರುತಿಸಿ ಇಟ್ಟುಕೊಳ್ಳಬೇಕು. ಬರವನ್ನು ಸಮರ್ಥವಾಗಿ ನಿರ್ವಹಿಸಲು ಅಧಿಕಾರಿಗಳು ಕ್ಷೇತ್ರಗಳಿಗೆ ಭೇಟಿ ನೀಡಬೇಕು ಎಂದರು.
ತುಂಬೆ ನೇತ್ರಾವತಿ, ಎ.ಎಂ.ಆರ್., ಮಳÀವೂರು ಅಣೆಕಟ್ಟುಗಳ ನೀರಿನ ಪ್ರಮಾಣದ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ನಿರ್ದಿಷ್ಟ ಪ್ರಮಾಣಕ್ಕಿಂತ ಕೆಳಗೆ ನೀರು ಇಳಿದರೆ, ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಿದ್ಧತೆ ಮಾಡಿಕೊಳ್ಳಲು ತಿಳಿಸಿದರು.
ತುಂಬೆ ನೇತ್ರಾವತಿ ಡ್ಯಾಂನಲ್ಲಿ ಪ್ರಸ್ತುತ 6 ಮೀಟರ್ ನೀರು ಇದೆ. ಮಂಗಳೂರು ಮಹಾನಗರಪಾಲಿಕೆ, 3 ಗ್ರಾಮ ಪಂಚಾಯತ್, ಮುಲ್ಕಿ ಮತ್ತು ಉಳ್ಳಾಲ ನಗರ ಪ್ರದೇಶಗಳಿಗೆ ಇಲ್ಲಿಂದ ನೀರು ಪೂರೈಕೆ ಆಗುತ್ತಿದೆ. ತುಂಬೆ ವೆಂಟೆಡ್ ಡ್ಯಾಂ ಕೆಳಭಾಗದ ನೀರನ್ನು ಪ್ರತಿನಿತ್ಯ ತುಂಬೆ ಡ್ಯಾಂಗೆ ಹಾಯಿಸಿ ನದಿ ನೀರಿನ ಮಟ್ಟವನ್ನು ಕಾಯ್ದುಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಹಾನಗರಪಾಲಿಕೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಕುಡಿಯುವ ನೀರಿನ ಸಮಸ್ಯೆ ಇರುವ ಮಂಗಳೂರು ನಗರದ ಎತ್ತರ ಪ್ರದೇಶಗಳಿಗೆ 15 ಟ್ಯಾಂಕರ್‍ಗಳ ಮೂಲಕ ಮಹಾನಗರಪಾಲಿಕೆಯು ನೀರು ಪೂರೈಕೆ ಮಾಡುತ್ತಿದೆ ಎಂದರು.
ಮಳವೂರು ಡ್ಯಾಂನಲ್ಲಿ 1.5 ಮೀ. ನೀರು ಲಭ್ಯವಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಮೂಲಕವೂ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಗ್ರಾಮೀಣ ಕುಡಿಯುವ ನೀರು ಇಂಜಿನಿಯರ್ ಸಭೆಗೆ ಮಾಹಿತಿ ನೀಡಿದರು.
ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿರುವ ಅಡ್ಯಾರ್-ಹರೇಕಳ ಡ್ಯಾಂ ಹಾಗೂ ಪುತ್ತೂರು ತಾ. ಬಿಳಿಯೂರು ಡ್ಯಾಂನಿಂದಲೂ ಅಗತ್ಯ ಬಿದ್ದರೆ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್, ಪುತ್ತೂರು ಉಪವಿಭಾಗಾಧಿಕಾರಿ ಜುಬಿನ್ ಮಹಾಪಾತ್ರ್ರ, ಮಂಗಳೂರು ಉಪವಿಭಾಗಾಧಿಕಾರಿ ಹರ್ಷವರ್ಧನ್, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles