ಮಂಗಳೂರು: ಚುನಾವಣಾ ಆಯೋಗ ಕಾಲಕಾಲಕ್ಕೆ ಹೊರಡಿಸುವ ಮಾರ್ಗಸೂಚಿಗಳನ್ನು ಚೆನ್ನಾಗಿ ಓದಿಕೊಂಡುಆ ರೀತಿ ಕಾರ್ಯನಿರ್ವಹಿಸಬೇಕು. ಚುನಾವಣಾ ಅಧಿಕಾರಿಗಳು ನಿರ್ವಹಿಸಬೇಕಾದ ಕಾರ್ಯಗಳ ಬಗ್ಗೆ ಆಯೋಗ ಸ್ಪಷ್ಟವಾಗಿ ತಿಳಿಸಿದೆ, ಅದರಂತೆ ಪ್ರತಿಯೊಬ್ಬರು ಆಯಾ ಗಡುವನ್ನು ಕಾಯದೆಯೇ ಕೂಡಲೇ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಮೂಲ ಮುಗಿಲನ್ ಎಂಪಿ ಹೇಳಿದರು.
ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಲೋಕಸಭಾ ಚುನಾವಣಾ ಪೂರ್ವಸಿದ್ದತೆಯ ನಿರ್ಣಾಯಕ ಮತಗಟ್ಟೆಗಳ ಗುರುತಿಸುವಿಕೆ ಬಗ್ಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.
ಆತಂಕ, ಭಯ ರಹಿತವಾಗಿ ಮುಕ್ತ ಹಾಗೂ ಪಾರದರ್ಶಕ ಚುನಾವಣೆಗೆ ಪ್ರತಿಯೊಬ್ಬರು ಸಜ್ಜಾಗಬೇಕು. . ಗಡಿ ಪ್ರದೇಶಗಳಾದ ಸುಳ್ಯ ಹಾಗೂ ಈಶ್ವರಮಂಗಳ, ತಲಪಾಡಿ, ಬಂಟ್ವಾಳ, ಬೆಳ್ತಂಗಡಿಯಲ್ಲಿ ಚೆಕ್ ಪೋಸ್ಟ್ ಗಳನ್ನು ತೆರೆಯಬೇಕು. ಚುನಾವಣೆ ಸಂದರ್ಭದಲ್ಲಿ ಬೇಕಾಗುವ ಸಾಮಗ್ರಿಗಳನ್ನು ರೂ. 1 ಲಕ್ಷ ದ ಒಳಗಡೆ ಭರಿಸಬೇಕು. ಅಗತ್ಯ ಸಾಮಗ್ರಿಗಳಿಗೆ ಹೆಚ್ಚಿನ ಒತ್ತು ನೀಡಿ ಖರೀದಿಸಿ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಜಿ ಸಂತೋಷ್ ಕುಮಾರ್, ಮಂಗಳೂರು ಉಪ ಪೊಲೀಸ್ ಆಯುಕ್ತ ಸಿದ್ಧಾರ್ಥ್ ಗೋಯಲ್, ಪೊಲೀಸ್ ವರಿಷ್ಠಾಧಿಕಾರಿ ಸಿ ಬಿ ರಿಷ್ಯಂತ್ ಪುತ್ತೂರು ಎಸಿ ಗಿರೀಶ್ ನಂದನ್, ಮಂಗಳೂರು ಎಸಿ ಹರ್ಷವರ್ಧನ್, ತಹಶೀಲ್ದಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.