ಮ೦ಗಳೂರು: ರಾಜ್ಯದಲ್ಲಿ ಸರಕಾರಿ ಇಲಾಖೆಗಳಲ್ಲಿ ಸಮವಸ್ತ್ರ ಇಲಾಖೆಗಳಲ್ಲಿ ಶೇ. 3 ಹಾಗೂ ಇತರ ಇಲಾಖೆಗಳಲ್ಲಿ ಶೇ.2 ಕ್ರೀಡಾಕೋಟಾ ಮೀಸಲಿಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಡಳಿತ, ಕರ್ನಾಟಕ ಒಲಿಂಪಿಕ್ ಸಂಸ್ಥೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾದ ಕರ್ನಾಟಕ ಕ್ರೀಡಾಕೂಟಕ್ಕೆ ಜನವರಿ 17 ರಂದು ನಗರದ ಮಂಗಳಾ ಕ್ರೀಡಾಂಗಣದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು ಕ್ರೀಡಾಕೂಟಕ್ಕೆ ಸರಕಾರ ಕ್ರೀಡೆಗೆ ಹೆಚ್ಚಿನ ಉತ್ತೇಜನ ನೀಡುತ್ತದೆ. ಓಲ೦ಪಿಕ್ ನಲ್ಲಿ ಪದಕ ವಿಜೇತರಿಗೆ 6 ಕೋಟಿ, ಏಶಿಯನ್ ಹಾಗೂ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಪದಕ ವಿಜೇತರಿಗೆ ಸರಕಾರದ ಬಹುಮಾನ ಮೊತ್ತವನ್ನು 5೦ ಲಕ್ಷ ರೂ.ಗೆ ಹೆಚ್ಚಿಸುವುದಾಗಿ ಘೋಷಿಸಿದರು.ಮಂಗಳಾ ಕ್ರೀಡಾಂಗಣದ ಅಭಿವೃದ್ದಿಗೆ 3 ಕೋಟಿ ರೂ. ನೀಡುವುದಾಗಿ ಅವರು ಹೇಳಿದರು.
ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಫರೀದ್ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ , ಹಾಗೂ ವಿಧಾನ ಪರಿಷತ್ ಶಾಸಕ ಹಾಗೂ ಮುಖ್ಯಂತ್ರಿಯವರ ರಾಜಕೀಯ ಕಾರ್ಯದರ್ಶಿ ಡಾ. ಕೆ. ಗೋವಿಂದರಾಜ್ , ಶಾಸಕರಾದ ಆಶೋಕ್ ರೈ, ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಮ೦ಜುನಾಥ ಭ೦ಡಾರಿ ಅತಿಥಿಗಳಾಗಿದ್ದರು. ಶಾಸಕ ಡಿ. ವೇದವ್ಯಾಸ ಕಾಮತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರಿನಲ್ಲಿ ಬ್ಯಾಡ್ಮಿಂಟನ್, ಬಾಸ್ಕೆಟ್ಬಾಲ್, ಫೆನ್ಸಿಂಗ್ (ಕತ್ತಿವರಸೆ) ಫುಟ್ಬಾಲ್, ಹ್ಯಾಂಡ್ಬಾಲ್, ಖೋಖೋ, ನೆಟ್ಬಾಲ್, ಈಜು, ಟೇಕ್ವೊಂಡೋ, ವಾಲಿಬಾಲ್, ವೇಯ್ಟ್ ಲಿಫ್ಟಿಂಗ್, ವುಶು ಕ್ರೀಡಾಕೂಟ ಆಯೋಜಿಸಲಾಗಿದೆ.
ಆರ್ಚರಿ(ಬಿಲ್ಲುಗಾರಿಕೆ), ಅಥ್ಲೆಟಿಕ್ಸ್ , ಬಾಕ್ಸಿಂಗ್, ಸೈಕ್ಲಿಂಗ್ ,ಜುಡೋ, ಕಬಡ್ಡಿ, ಕುಸ್ತಿ, ಕಯಾಕಿಂಗ್ ಮತ್ತು ಕನೋಯಿಂಗ್ ಕ್ರೀಡೆಗಳನ್ನು ಉಡುಪಿ ಜಿಲ್ಲೆಯಲ್ಲಿ ಆಯೋಜನೆಗೊಂಡಿದ್ದು ಹಾಕಿ, ಲಾನ್ ಟೆನ್ನಿಸ್, ಟೇಬಲ್ ಟೆನ್ನಿಸ್ ಕ್ರೀಡೆಗಳನ್ನು ಮಣಿಪಾಲದಲ್ಲಿ ಆಯೋಜಿಸಲಾಗಿದೆ.
ಕ್ರೀಡಾಕೂಟವು 25 ವಿವಿಧ ಕ್ರೀಡಾ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಒಳಗೊಂಡಿರುತ್ತದೆ, 3,247 ಕ್ರೀಡಾಪಟುಗಳು, 599 ತಾಂತ್ರಿಕ ಅಧಿಕಾರಿಗಳು ಮತ್ತು 404 ಸಂಘಟನಾ ತಂಡದ ಸದಸ್ಯರು, ಒಟ್ಟು 4,250 ಭಾಗವಹಿಸುವವರು. ಒಟ್ಟು ಸ್ಪರ್ಧೆಗಳಲ್ಲಿ 12 ಸ್ಪರ್ಧೆಗಳು ಮಂಗಳೂರಿನಲ್ಲಿ, 11 ಉಡುಪಿ ಮತ್ತು ಮಣಿಪಾಲದಲ್ಲಿ ಮತ್ತು 2 ಸ್ಪರ್ಧೆಗಳು ಬೆಂಗಳೂರಿನಲ್ಲಿ ನಡೆಯಲಿವೆ.ಕ್ರೀಡಾಪಟುಗಳು ಒಟ್ಟು 631 ಚಿನ್ನದ ಪದಕಗಳು, 631 ಬೆಳ್ಳಿ ಪದಕಗಳು ಮತ್ತು 827 ಕಂಚಿನ ಪದಕಗಳಿಗಾಗಿ ಸ್ಪರ್ಧಿಸಲಿದ್ದಾರೆ.
ಕ್ರೀಡಾಕೂಟದ ಸಮಾರೋಪ ಸಮಾರಂಭ ಉಡುಪಿಯ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಜನವರಿ 23 ರಂದು ಸಂಜೆ 4:30 ಗಂಟೆಗೆ ನಡೆಯಲಿದೆ.