ಮ೦ಗಳೂರು: ದ.ಕ.ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಾವೂರು ಇದರ ನೂತನ ಕಟ್ಟಡದ ಶಂಕುಸ್ಥಾಪನೆ ಬುಧವಾರ ಬೆಳಗ್ಗೆ ನಡೆಯಿತು. ಕೊಡುಗೈ ದಾನಿ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೇಶವ ಅಮೀನ್ ಅವರು ಅಂದಾಜು 1 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ. ಅವರು ಶಂಕುಸ್ಥಾಪನೆ ನೆರವೇರಿಸಿದರು.
“ಸರಕಾರಿ ಶಾಲೆಗಳು ಮಕ್ಕಳಿಲ್ಲದೆ ಸುಸಜ್ಜಿತ ಕಟ್ಟಡ ಮತ್ತು ಮೂಲಭೂತ ಸೌಲಭ್ಯವಿಲ್ಲದೆ ಬರಡಾಗುತ್ತಿರುವ ಈ ಸಂದರ್ಭದಲ್ಲಿ ಕೇಶವ ಅಮೀನ್ ಅವರು ತಾವು ಕಲಿತ ಸರಕಾರಿ ಶಾಲೆಯ ಅಭಿವೃದ್ಧಿಗೆ ಮುಂದಾಗಿರುವುದು ಶ್ಲಾಘನೀಯ ವಿಚಾರ. ಅವರು 7 ಕೊಠಡಿಗಳ ನಿರ್ಮಾಣಕ್ಕೆ ಅಂದಾಜು 1 ಕೋಟಿ ರೂ. ದೇಣಿಗೆ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಸರಕಾರದಿಂದ ಸಿಗುವ ಎಲ್ಲ ಸವಲತ್ತುಗಳನ್ನು ಬಳಸಿಕೊಂಡು ಕಾವೂರು ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಲು ಎಲ್ಲರೂ ಶ್ರಮಿಸೋಣ” ಎಂದು ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.
ಉದ್ಯಮಿ ಕೇಶವ ಅಮೀನ್ ಮಾತನಾಡಿ, “ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳು ಒಟ್ಟು ಸೇರಿ ನನಗೆ ಈ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ. ಇದು ನಾನು ಕಲಿತ ಶಾಲೆ ಮತ್ತು ನನ್ನೂರಿಗೆ ಕೊಡಬಹುದಾದ ಕೊಡುಗೆ. ಶಾಲೆಯ ಎಲ್ಲ ಹಳೆ ವಿದ್ಯಾರ್ಥಿಗಳು ನಮ್ಮ ಜೊತೆ ಕೈಜೋಡಿಸಿ”ಎಂದರು.
ಮುಖ್ಯ ಅತಿಥಿಗಳಾಗಿ ಮಂಗಳೂರು ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಜೇಮ್ಸ್ ಕುಟಿನ್ಹೊ, ಕಾರ್ಪೋರೇಟರ್ ಸುಮಂಗಲಾ ರಾವ್, ಸಿ.ಆರ್.ಪಿ. ದೀಪಿಕಾ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಚಂದ್ರಹಾಸ, ಕಾರ್ಯದರ್ಶಿ ವಿಕೇಶ್ ಮತ್ತು ಲಾವಣ್ಯ ಶೆಟ್ಟಿ, ವಕೀಲ ಗುರುಪ್ರಸಾದ್, ನಿವೃತ್ತ ಮುಖ್ಯ ಶಿಕ್ಷಕಿ ಚಂದ್ರಾವತಿ, ನಿವೃತ್ತ ಮುಖ್ಯ ಶಿಕ್ಷಕ ಸುರೇಂದ್ರನಾಥ ಶೆಟ್ಟಿ, ನಿವೃತ್ತ ಮುಖ್ಯ ಶಿಕ್ಷಕ ಭುಜಂಗ ಪೂಜಾರಿ, ಶಾಲಾಭಿವೃದ್ಧಿ ಸಮಿತಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಲಕ್ಷ್ಮಣ ಛಲವಾದಿ, ಪದಾಧಿಕಾರಿಗಳಾದ ನಿತೇಶ್ ಕಾವೂರು, ಅಜಿತ್, ಶಿತೇಶ್ ಕೊಂಡೆ, ಸಮಾಜ ಸೇವಕ ಹಸನಬ್ಬ, ಪೆಲ್ಸಿ ರೇಗೋ ಅಶ್ವಿನಿ, ಗೋಕುಲ್ ದಾಸ್ ಪ್ರಭು, ಅರ್ಚನಾ, ಕೃಷ್ಣಪ್ಪ ಸಾಲ್ಯಾನ್, ಕುಸುಮಕರ್, ಶಾಲಾ ಶಿಕ್ಷಕರು, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಮತ್ತು SDMC ಪದಾಧಿಕಾರಿಗಳು ಉಪಸ್ಥಿತರಿದ್ದರು.ಶಾಲಾ ಮುಖ್ಯ ಶಿಕ್ಷಕಿ ಸೀತಮ್ಮ.ಜೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.