ಮ೦ಗಳೂರು: ಜಾಗ ಖರೀದಿ, ಮಾರಾಟ ಸ೦ದಭ೯ದಲ್ಲಿ ಉಪನೋಂದಣಾಧಿಕಾರಿಯವರ ಕಚೇರಿಯಲ್ಲಿ ಜಾಗ ಮಾರಾಟದ ಬಗ್ಗೆ ಹೆಬ್ಬೆರಳಿನ ಗುರುತು ಹಾಗೂ ಆಧಾರ್ ಕಾರ್ಡ್ ಪ್ರತಿ ನೀಡಿದವರ ಬ್ಯಾಂಕ್ ಖಾತೆಯಿ೦ದ ಯಾರೋ ಅಪರಿಚಿತ ವ್ಯಕ್ತಿಗಳು ತಂತ್ರಾಂಶ ಬಳಸಿ ಹಣವನ್ನು ಮೋಸದಿಂದ ವರ್ಗಾಯಿಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು ಜಾಗ ಖರೀದಿ, ಮಾರಾಟಗಾರರು ಉಪನೋಂದಣಾಧಿಕಾರಿಯವರ ಕಚೇರಿಯಲ್ಲಿಹೆಬ್ಬೆರಳಿನ ಗುರುತು ಹಾಗೂ ಆಧಾರ್ ಕಾರ್ಡ್ ಪ್ರತಿ ನೀಡಲು ಭಯಪಡುವ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ಸ೦ಬ೦ಧಿಸಿದ೦ತೆ ಮ೦ಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಗಣನೀಯ ಸ೦ಖ್ಯೆಯಲ್ಲಿ ದೂರುಗಳು ದಾಖಲಾಗುತ್ತಿವೆ.
ಮ೦ಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಗುರುವಾರ ಬ೦ದಿರುವ ದೂರಿನ೦ತೆ ದೂರುದಾರರ ಮೊಬೈಲ್ ಸಂಖ್ಯೆಗೆ ಎಸ್ ಎಮ್ ಎಸ್ ಬಂದಿದ್ದು, ಸದ್ರಿ ಸಂದೇಶವನ್ನು ಪರಿಶೀಲಿಸಿದಾಗ ಅವರ ಬ್ಯಾಂಕ್ ಖಾತೆಯಿ೦ದ ದಿನಾಂಕ 23-08-2023 ರಂದು 4,990 ರೂ., ದಿನಾಂಕ 24-08-2023 ರಂದು 8500 ರೂ.ಮತ್ತು ದಿನಾಂಕ 6-9-2023 ರಿಂದ 9-9-2023 ರವರೆಗೆ 10,000/-, 10,000/- ಹಾಗೂ 3,400/- ಒಟ್ಟು ರೂ.36,890/-ಹಣ ಕಡಿತವಾಗಿರುವ ಬಗ್ಗೆ ತಿಳಿದು ಬಂದಿರುತ್ತದೆ. ನಂತರ ದೂರುದಾರರು ಬ್ಯಾಂಕ್ ಶಾಖೆಗೆ ತೆರಳಿ ವಿಚಾರಿಸಿ ಖಾತೆಯ ಸ್ಟೇಟ್ ಮೆಂಟ್ ನ್ನು ತೆಗೆದು ಪರಿಶೀಲಿಸಿದಾಗ , ಮೇಲಿನ ದಿನಾಂಕಗಳಂದು ಒಟ್ಟು 36,890/- ರೂ ಹಣವು ಹಂತ ಹಂತವಾಗಿ ಅವರ ಬ್ಯಾಂಕ್ ಖಾತೆಯಿಂದ ಕಡಿತವಾಗಿರುವುದು ಧೃಢಪಟ್ಟಿರುತ್ತದೆ. ದೂರುದಾರರ ಖಾತೆಯಿಂದ ಹಣವನ್ನು ಯಾರೋ ಅಪರಿಚಿತ ವ್ಯಕ್ತಿಗಳು ಅವರ ಅಧಾರ್ ಕಾರ್ಡ್ ಮಾಹಿತಿ ಉಪಯೋಗಿಸಿ( AEPS) ಅನಧೀಕೃತವಾಗಿ ತೆಗೆದಿರುವ ಬಗ್ಗೆ ತಿಳಿದುಬಂದಿದೆ. ಈ ಬಗ್ಗೆ ದೂರುದಾರರಿಗೆ ಯಾವುದೇ ಓಟಿಪಿ ಸಂದೇಶವು ಬಂದಿರುವುದಿಲ್ಲ. ದಿನಾಂಕ: 2-8-2023 ರಂದು ದೂರುದಾರರು ಉಪನೋಂದಣಾಧಿಕಾರಿಯವರ ಕಚೇರಿ ಮಂಗಳೂರು ಇಲ್ಲಿಗೆ ಜಾಗ ಮಾರಾಟದ ಬಗ್ಗೆ ಹೆಬ್ಬೆರಳಿನ ಗುರುತು ಹಾಗೂ ಆಧಾರ್ ಕಾರ್ಡ್ ಪ್ರತಿ ನೀಡಿದ್ದು, ಯಾರೋ ಅಪರಿಚಿತ ವ್ಯಕ್ತಿಗಳು ತಂತ್ರಾಂಶ ಬಳಸಿ ಅವರ ಆಧಾರ್ ಕಾರ್ಡ್ ನ ಮಾಹಿತಿಯನ್ನು ಉಪಯೋಗಿಸಿ ಹಂತ ಹಂತವಾಗಿ ರೂ.36,890/-ಹಣವನ್ನು ಮೋಸದಿಂದ ವರ್ಗಾಯಿಸಿಕೊಂಡಿರುವುದಾಗಿ ದೂರಿನಲ್ಲಿ ವಿವರಿಸಲಾಗಿದೆ.