ಮ೦ಗಳೂರು: ಮಹಾತ್ಮ ಗಾಂಧಿ ಎಂದರೆ ಕೇವಲ ಒಂದು ವ್ಯಕ್ತಿ ಅಥವಾ ವ್ಯಕ್ತಿತ್ವ ಅಲ್ಲ ಇಡೀ ವಿಶ್ವಕ್ಕೆ ಅಹಿಂಸೆ ಮತ್ತು ಶಾಂತಿಯ ತತ್ವ ಬೋಧಿಸಿದ ಮಹಾ ಚೇತನ ಎಂದು ಜಿಲ್ಲಾಧಿಕಾರಿ ಮುಲ್ಲಯಿ ಮುಗಿಲನ್ ಎಂ. ಪಿ ಅವರು ಹೇಳಿದರು.
ಅವರು ಬುಧವಾರ ದ. ಕ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಭಾರತ ಸೇವಾದಳ ಜಿಲ್ಲಾ ಸಮಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಗರ ಕುದ್ಮುಲ್ ರಂಗರಾವ್ ಪುರಭವನದ ಎದುರು ಗಾಂಧಿ ಪ್ರತಿಮೆಯ ಬಳಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು
ಎಲ್ಲರ ಮೇಲು ಪ್ರಭಾವ ಮಾಡುವ ಚಿಂತನೆ ಗಾಂಧೀಜಿಯವರದ್ದು,ಅವರ ಬದುಕು ಮತ್ತು ಚಿಂತನೆಗಳಿಂದ ನಾವೆಲ್ಲರೂ ಪ್ರೇರೇಪಣೆ ಯಾಗಬೇಕು, ಮಹಾತ್ಮರು ನೀಡಿದ ಸ್ವಾತಂತ್ರ್ಯ, ಇಂದು ನಾವು ಬದುಕುತ್ತಿರುವ ಸಮಾಜವನ್ನು ದೇಶವನ್ನು ಮುಂದಿನ ಪೀಳಿಗೆಗೂ ನೀಡಬೇಕಾದರೆ ನಾವು ಗಾಂಧೀಜಿಯವರ ಬದುಕು ಅವರ ಚಿಂತನೆಗಳಿಂದ ಪ್ರೇರೇಪಣೆ ಆಗಬೇಕು ವಿಶ್ವದ ಪ್ರತಿ ನಾಯಕನ ಹಿಂದೆ ಗಾಂಧೀಜಿಯ ಚಿಂತನೆ,ಆತ್ಮವಿಶ್ವಾಸದ ಮತ್ತು ಒಗ್ಗಟ್ಟಿನ ತತ್ವಗಳು ಅಡಕವಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ, ಅಪರ ಜಿಲ್ಲಾಧಿಕಾರಿ ಡಾ. ಜಿ ಸಂತೋಷ್ ಕುಮಾರ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಸಿ.ಎಲ್ ಆನಂದ್, ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್, ಪೊಲೀಸ್ ಅಧೀಕ್ಷಕ ಯತೀಶ್, ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ, ಭಾರತ ಸೇವಾದಳದ ಜಯರಾಮ ರೈ, ಬಶೀರ್ ಬೈಕಂಪಾಡಿ, ಮಂಜೇಗೌಡ ಮತ್ತಿತರರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ನಡೆದ ಜಿಲ್ಲಾಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ಸ್ವಚ್ಛತಾ ಸೇವಾ ಆಂದೋಲನ ಕಾಯ೯ಕ್ರಮದಲ್ಲಿ ಉತ್ತಮ ಸಾಧನೆ ಮಾಡಿದ ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಬಹುಮಾನ ವಿತರಿಸಲಾಯಿತು.ಇದೇ ಸಂದಭ೯ದಲ್ಲಿ ಸ್ವಚ್ಛತಾ ಪ್ರಮಾಣವಚನ ಸ್ವೀಕರಿಸಲಾಯಿತು.