ಪುತ್ತೂರು:ಪುತ್ತೂರಿಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೋವ೯ರ ಗಮನ ಬೇರೆಡೆಗೆ ಸೆಳೆದು ಚಿನ್ನದ ಚೈನ್ ಕಳವು ಮಾಡಿರುವ ಘಟನೆ ನಡೆದಿದೆ.
ಪುತ್ತೂರು ನಿವಾಸಿ ಜಯರಾಮ ಭಟ್ ಪಿ ಎಂಬವರು ಶುಕ್ರವಾರ ಮಧ್ಯಾಹ್ನ ಮಂಗಳೂರಿನ ಜುವೆಲ್ಲರಿ ಒಂದರಲ್ಲಿ 1,60,436 ರೂ. ಮೌಲ್ಯದ 23.970 ಗ್ರಾಂ ಚಿನ್ನ ಚೈನ್ ಖರೀದಿಸಿದ್ದರು. ಚಿನ್ನದ ಚೈನ್ ನ್ನು ಬ್ಯಾಗ್ ನಲ್ಲಿರಿಸಿ ಕೆ ಎಸ್ ಆರ್ ಟಿ ಸಿ ಬಸ್ ಮೂಲಕ ಪುತ್ತೂರಿಗೆ ಪ್ರಯಾಣಿಸುತ್ತಿದ್ದರು. ಬಸ್ ನಿಲ್ದಾಣದಿಂದ ಹೊರಟು ಮಂಗಳೂರು ಬಂಟ್ಸ್ ಹಾಸ್ಟೆಲ್ ಬಳಿ ತಲುಪಿದಾಗ ಬಸ್ ಪ್ರಯಾಣಿಕರಿಂದ ಭರ್ತಿಯಾಗಿತ್ತು.ಅವರ ಪಕ್ಕದಲ್ಲಿ ಕುಳಿತಿದ್ದ ಅಪರಿಚಿತ ಹೆಂಗಸು ಕೈಯಲ್ಲಿದ್ದ ಚಿಲ್ಲರೆ ಹಣವನ್ನು ಕೆಳಗಡೆ ಬೀಳಿಸಿ ಗಮನವನ್ನು ಬೇರೆಡೆಗೆ ಸೆಳೆದಿರುತ್ತಾರೆ ಹಾಗೂ ಅಪರಿಚಿತ ಹೆಂಗಸು ಮಗುವಿನ ಜೊತೆ ಜಯರಾಮ ಭಟ್ ಹಿಡಿದುಕೊಂಡಿದ್ದ ಬ್ಯಾಗಿನ ಮೇಲೆ ಆಯತಪ್ಪಿ ಬಿದ್ದಿರುತ್ತಾರೆ. ಆ ಬಳಿಕ ಮಹಿಳೆ ಇನ್ನೋರ್ವ ಮಹಿಳೆಯೊಂದಿಗೆ ಜ್ಯೋತಿ ಸರ್ಕಲ್ ಬಳಿ ಬಸ್ ನಿಂದ ಇಳಿದುಹೋಗಿರುತ್ತಾರೆ. ಭಟ್ ಅವರು ಪುತ್ತೂರುಗೆ ತಲುಪಿ ತನ್ನ ಮನೆಗೆ ಬಂದು ಬ್ಯಾಗ್ ನೋಡಿದಾಗ ಮಂಗಳೂರಿನಲ್ಲಿ ಖರೀದಿಸಿ ತಂದಿದ್ದ ಚಿನ್ನದ ಸರ ಇದ್ದ ಬಾಕ್ಸ್ ಬ್ಯಾಗ್ ನಲ್ಲಿರಲಿಲ್ಲ. ಅಪರಿಚಿತ ಹೆಂಗಸರು ಚಿನ್ನದ ಸರವನ್ನು ಎಗರಿಸಿದ್ದರು. ಭಟ್ ಅವರು ವೀಡಿರುವ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.