ಮ೦ಗಳೂರು: ‘ಸಾಲುಮರದ ತಿಮ್ಮಕ್ಕ’ ಅವರ ಜನ್ಮದಿನದ ಅಂಗವಾಗಿ ಮಂಗಳೂರು ಮಹಾನಗರ ಪಾಲಿಕೆ ನೇತೃತ್ವದಲ್ಲಿ ‘ಉದಯವಾಣಿ’ ಸಹಭಾಗಿತ್ವದಲ್ಲಿ ೬೦ ವಾರ್ಡ್‌ಗಳ ವ್ಯಾಪ್ತಿಯಲ್ಲಿ ೧೦ ಸಾವಿರ ಗಿಡ ನೆಡುವ ‘ಹಸಿರೇ ಉಸಿರು’ ಕಾರ್ಯಕ್ರಮಕ್ಕೆ ಸೋಮವಾರ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಚಾಲನೆ ನೀಡಲಾಯಿತು.
ಸಂಸದ ಕ್ಯಾ|ಬ್ರಿಜೇಶ್ ಚೌಟ ಅವರು ಮಾತನಾಡಿ, ಹವಾಮಾನ ಬದಲಾವಣೆ ಹಾಗೂ ಸಮುದ್ರ ಮಟ್ಟ ಏರಿಕೆ ಆಗುತ್ತಿರುವ ಗಂಭೀರ ಕಾಲದಲ್ಲಿ ಗಿಡ ಮರಗಳ ಸಂರಕ್ಷಣೆಯ ಮುಖೇನವಾಗಿ ಪರಿಸರ ಉಳಿಸುವ ಕಾರ್ಯ ಎಲ್ಲೆಡೆಯೂ ನಿತ್ಯ ನಿರಂತರವಾಗಿ ನಡೆಯಬೇಕಿದೆ ಎಂದು ಹೇಳಿದರು.
ಶಾಸಕ ಡಿ.ವೇದವ್ಯಾಸ ಕಾಮತ್ ಮಾತನಾಡಿ, ಹೊಸದಿಲ್ಲಿಯಲ್ಲಿ ಪರಿಸರ ಅಸಮತೋಲನದಿಂದಾಗಿ ಸಾಕಷ್ಟು ಸಮಸ್ಯೆಗಳು ಆಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಸದ್ಯ ಮಂಗಳೂರಿನ ಬಂದರು ಹಾಗೂ ಕುದ್ರೋಳಿ ಭಾಗದಲ್ಲಿ ಹಸುರು ಶೇ.೪ರ ಗಡಿಯಲ್ಲಿರುವುದು ಅಪಾಯಕಾರಿ. ಇದಕ್ಕಾಗಿ ನಾವೆಲ್ಲ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜತೆಯಾಗಬೇಕಿದೆ. ಈ ನೆಲೆಯಿಂದ ಭವಿಷ್ಯದ ದಿನಕ್ಕಾಗಿ ಗಿಡ ನೆಡುವ ಪರಿಕಲ್ಪನೆಯನ್ನು ನಗರ ಭಾಗದಲ್ಲಿ ಜಾರಿಗೊಳಿಸಲು ಪಾಲಿಕೆ ಮುಂದಾಗಿರುವುದು ಅದ್ವಿತೀಯ. ಮಂಗಳೂರು ನಗರ-ಗ್ರಾಮಾಂತರ ಭಾಗದಲ್ಲಿ ಹಣ್ಣಿನ ಗಿಡಗಳನ್ನು ಅತ್ಯಽಕ ಸಂಖ್ಯೆಯಲ್ಲಿ ನೆಡುವ ಮೂಲಕ ಪಕ್ಷಿಗಳಿಗೆ ಆಹಾರ ಒದಗಿಸುವ ಕಾರ್ಯ ನಡೆಸಬೇಕಿದೆ. ಪಾಲಿಕೆ ವತಿಯಿಂದ ಈ ನಿಟ್ಟಿನಲ್ಲಿ ಪೂರಕ ಹೆಜ್ಜೆ ನಡೆಯಲಿದೆ. ಪ್ರತೀ ವರ್ಷವೂ ಇಂತಹ ಪರಿಕಲ್ಪನೆ ಜಾರಿಯಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮೇಯರ್ ಸುಽರ್ ಶೆಟ್ಟಿ ಕಣ್ಣೂರು ಅವರು, ಹಿಂದೆ ಮರ, ಗಿಡಗಳ ಕೃಷಿ ಭೂಮಿಯನ್ನು ಮಂಗಳೂರು ಹೊಂದಿತ್ತು. ಆದರೆ, ಅಭಿವೃದ್ದಿಯ ನೆಪದಿಂದ ನಿರಂತರವಾಗಿ ಗಿಡ-ಮರಗಳನ್ನು ಕಡಿಯಲಾಯಿತು. ಗಿಡಗಳನ್ನು ನೆಡುವ ಮೂಲಕ ಪರಿಸರ ಸಮತೋಲನ ಕಾಯ್ದುಕೊಳ್ಳುವ ಅನಿವಾರ್ಯತೆ ನಮ್ಮಲ್ಲಿದೆ. ಹೀಗಾಗಿ ಮಂಗಳೂರು ನಗರ ವ್ಯಾಪ್ತಿಯಲ್ಲಿ ೧೦ ಸಾವಿರ ಗಿಡಗಳನ್ನು ಪಾಲಿಕೆ ನೇತೃತ್ವದಲ್ಲಿ ನೆಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಪರಿಸರ ಪ್ರೇಮಿ ಮಾಧವ ಉಳ್ಳಾಲ ಅವರಿಗೆ ‘ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಪ್ರಶಸ್ತಿ’ ನೀಡಿ ಮಂಗಳೂರು ಪಾಲಿಕೆ ಇದೇ ವೇಳೆ ಗೌರವಿಸಿತು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಉಪಮೇಯರ್ ಸುನಿತಾ, ಮನಪಾ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಮಾಜಿ ಮೇಯರ್‌ಗಳಾದ ಎಂ.ಶಶಿಧರ ಹೆಗ್ಡೆ, ದಿವಾಕರ ಪಾಂಡೇಶ್ವರ, ಸ್ಥಾಯಿ ಸಮಿತಿ ಅಧ್ಯಕ್ಷರಾದ ವರುಣ್ ಚೌಟ, ಭರತ್ ಕುಮಾರ್, ಲೋಹಿತ್ ಅಮೀನ್, ಉದಯವಾಣಿ ಸಂಪಾದಕ ಅರವಿಂದ ನಾವಡ, ಮಂಗಳೂರು ವಿಭಾಗ ಉಪ ಅರಣ್ಯ ಸಂರಕ್ಷಣಾಽಕಾರಿ ಆಂಟನಿ ಎಸ್.ಮರಿಯಪ್ಪ, ಮಂಗಳೂರು ಉಪ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ.ಶ್ರೀಧರ್, ಮಂಗಳೂರು ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ, ಮನಪಾ ಆಯುಕ್ತ ಆನಂದ ಸಿ.ಎಲ್., ಮುಂತಾದವರು ಉಪಸ್ಥಿತರಿದ್ದರು. ಮಂಜುಳಾ ಶೆಟ್ಟಿ ನಿರೂಪಿಸಿದರು.